ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವರ ಸೂಚನೆ
ಭಿಕ್ಷಾಟನೆ ನಿರ್ಮೂಲನೆಗಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
Published: 18th February 2022 08:32 PM | Last Updated: 18th February 2022 08:38 PM | A+A A-

ಕೋಟಾ ಶ್ರೀನಿವಾಸ ಪೂಜಾರಿ
ಬೆಂಗಳೂರು: ಭಿಕ್ಷಾಟನೆ ನಿರ್ಮೂಲನೆಗಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ಮಕ್ಕಳು ಮತ್ತು ತಾಯಂದಿರು ಹಸುಗೂಸುಗಳನ್ನು ಬಳಸಿ ಭಿಕ್ಷಾಟನೆ ಮಾಡುವ ಸಮಸ್ಯೆ ಕುರಿತು ಕೈಗೊಳ್ಳಬಹುದಾದ ಪರಿಣಾಮಕಾರಿ ಕ್ರಮಗಳ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಮೊದಲು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಸಂಪೂರ್ಣವಾಗಿ ರಕ್ಷಿಸಿ, ನಂತರ ಹಂತ ಹಂತವಾಗಿ ಸಾಮಾನ್ಯ ಭಿಕ್ಷುಕರು ಮತ್ತು ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿದರು.
ಬೆಂಗಳೂರು ನಗರವನ್ನು ಭಿಕ್ಷುಕ ರಹಿತ ನಗರವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯಡಿ ಭಿಕ್ಷುಕರ ಸಮೀಕ್ಷೆ ನಡೆಸಲು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಗೆ ವಹಿಸಲಾಗಿದೆ. ಕೇಂದ್ರ ಪರಿಹಾರ ಸಮಿತಿ ಅವರೊಂದಿಗೆ ಸಭೆ ನಡೆಸಿ ಶೀಘ್ರ ಸಮೀಕ್ಷೆ ಪೂರ್ಣಗೊಳಿಸಿ ವರದಿ ಪಡೆಯಲು ಸಚಿವರು ಸೂಚಿಸಿದರು.
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಭಿಕ್ಷುಕರ ಉಪ ಕರವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡಲು ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮುಖ್ಯಸ್ಥರು ನಿರ್ದೇಶಿಸುವಂತೆ ಸಚಿವರು ಆದೇಶಿಸಿದರು. ಕೇಂದ್ರ ಪರಿಹಾರ ಸಮಿತಿ ಸಭೆಯಲ್ಲಿ ನಡೆಸಿದಂತೆ ಇತರೆ ಜಿಲ್ಲಾ ಕೇಂದ್ರಗಳಲ್ಲಿಯೂ ಸಭೆ ನಡೆಸಿ ಭಿಕ್ಷಾಟನೆ ನಿರ್ಮೂಲನೆ ಮಾಡುವುದರ ಜೊತೆಗೆ ಭಿಕ್ಷುಕರ ಉಪ ಕರವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮಾನಸಿಕ ಅಸ್ವಸ್ಥ ನಿರಾಶ್ರಿತರ ಪುನರ್ವಸತಿಗಾಗಿ ಅಲ್ಪಾವಧಿ ಮತ್ತು ಧೀರ್ಘಾವಧಿ ಪುನರ್ವಸತಿ ಕಲ್ಪಿಸಲು ಮೂಲಭೂತ ಸೌಕರ್ಯಗಳಿಗಗೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಿಕ್ಷಾಟನೆ ನಿರ್ಮೂಲನೆ ಕುರಿತು ಸಮಾಜ ಕಲ್ಯಾಣ, ಗೃಹ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.