ರಾಗಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ, ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಬೇಕು: ಹೆಚ್.ಡಿ.ದೇವೇಗೌಡ
ರಾಗಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಒತ್ತಾಯಿಸಿದ್ದಾರೆ.
Published: 18th February 2022 12:54 AM | Last Updated: 18th February 2022 01:08 PM | A+A A-

ಹೆಚ್. ಡಿ. ದೇವೇಗೌಡ
ಬೆಂಗಳೂರು: ರಾಗಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ ಅವರು, ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೀನಿ. ನಮ್ಮ ಮಾತಿಗೆ ಬೆಲೆ ಕೊಡ್ತಾರೊ ಇಲ್ಲವೋ ಗೊತ್ತಿಲ್ಲ ಎಂದರು.
ಕೇಂದ್ರ ಸರ್ಕಾರ ರಾಗಿಗೆ 3,777 ರೂಪಾಯಿಯನ್ನು ಬೆಂಬಲ ಬೆಲೆಯನ್ನು ಘೋಷಿಸಿದೆ. ಕಳೆದ ಬಾರಿ 3.295 ರೂಪಾಯಿ ಇತ್ತು. ಕೇವಲ 52 ರೂ. ಹೆಚ್ಚಳ ಮಾಡಿದ್ದಾರೆ. ಯಾವ ಆಧಾರದ ಮೇಲೆ 52 ರೂ. ಹೆಚ್ಚಳ ಮಾಡಿದ್ದಾರೋ ಗೊತ್ತಿಲ್ಲ. ನೆಪ ಮಾತ್ರಕ್ಕೆ 52 ರೂ. ಹೆಚ್ಚಳ ಮಾಡಿದ್ದಾರೆ. ರೈತರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತೇನೆ. ನಾವೆಲ್ಲ ರೈತ ಕುಟುಂಬದವರೇ ಹಾಗಾಗಿ ಅವರಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಲುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಹಿಜಾಬ್ ವಿವಾದವನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿತ್ತು: 6 ಬಾರಿ ಗೆದ್ದವರನ್ನು ನಾಳೆ ಬೆಳಿಗ್ಗೆಯೇ ಅಧಿಕಾರದಿಂದ ಇಳಿಸಲು ಆಗುತ್ತಾ?
52 ರೂ. ಬೆಂಬಲ ಬೆಲೆಯಿಂದ ಏನಾಗುತ್ತೆ ನನಗಂತೂ ಅರ್ಥವಾಗುತ್ತಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಅಷ್ಟೇ. ಪ್ರತಿ ಕ್ವಿಂಟಾಲ್ ರಾಗಿಗೆ 4 ಸಾವಿರ ರೂ. ಬೆಂಬಲ ಬೆಲೆ ಕೊಡಬೇಕು ಎಂದು ಹೇಳಿದ ಮಾಜಿ ಪ್ರಧಾನಿ, ಇದೇ 20 ರಂದು ದೆಹಲಿಗೆ ಹೋಗುತ್ತೇನೆ. ಪ್ರಧಾನ ಮಂತ್ರಿ ಅವರನ್ನು ಭೇಟಿಗೆ ಸಮಯ ಕೇಳುತ್ತೀನಿ. ಭೇಟಿಗೆ ಅವಕಾಶ ಸಿಕ್ಕರೆ ಎಲ್ಲಾ ವಿಷಯವನ್ನು ಅವರ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ಹಿಜಾಬ್ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ದೇವೇಗೌಡರು. ಆರಂಭದಲ್ಲಿಯೇ ಸರ್ಕಾರ ಇದನ್ನು ಚಿವುಟಿ ಹಾಕಬೇಕಿತ್ತು. ನ್ಯಾಯಾಲಯದ ಆದೇಶಕ್ಕೂ ಬಗ್ಗಲ್ಲ ಅಂತ ಹೆಣ್ಣು ಮಕ್ಕಲು ಹೇಳಿಕೆ ಕೊಡ್ತಾರೆ. ಇದನ್ನು ಹೀಗೆ ಹರಡು ಬಿಟ್ಟರೆ ಕಷ್ಟವಾಗುತ್ತದೆ. ಗಾಂಧೀಜಿ ಅವರ ಸ್ವಾತಂತ್ರ್ಯ ತಂದುಕೊಟ್ಟರು, ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿಕೊಟ್ಟರು ಈಗ ಏನಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.