ಸಿಡಿ ಕೇಸ್: ಜಾರಕಿಹೊಳಿಗೆ ಮತ್ತೆ ಸಂಕಷ್ಟ; ಎಸ್ಐಟಿ 'ಬಿ' ರಿಪೋರ್ಟ್'ಗೆ ಸುಪ್ರೀಂ ಕೋರ್ಟ್ ತಡೆ
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ.
Published: 19th February 2022 08:20 AM | Last Updated: 19th February 2022 01:20 PM | A+A A-

ರಮೇಶ್ ಜಾರಕಿಹೊಳಿ
ನವದೆಹಲಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ.
ಸಂತ್ರಸ್ತ ಯುವತಿಯು ಎಸ್ಐಟಿ ರಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ.ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ.ಮಾಹೇಶ್ವರಿ ಅವರಿದ್ದ ಪೀಠ, ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಅಮಾನತಿನಲ್ಲಿ ಇರಿಸಿತು.
ಇದನ್ನೂ ಓದಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸುಪ್ರೀಂ ಕೋರ್ಟ್ ಅಂಗಳಕ್ಕೆ
ಸರ್ಕಾರ ಸ್ವಯಂಪ್ರೇರಿತವಾಗಿ ಎಸ್ಐಟಿ ರಚನೆ ಮಾಡಿಲ್ಲ. ಎಸ್ಐಟಿ ರಚನೆಗೆ ರಾಜಕೀಯ ಒತ್ತಡ ಹೇರಲಾಗಿದೆ. ಇಂತಹ SIT ವರದಿ ಆಧರಿಸಿ ವಿಚಾರಣೆ ನಡೆಸುವುದು ತಪ್ಪು. ಎಸ್ಐಟಿ ತನಿಖಾ ವರದಿಯ ಮೇಲೆ ನಮಗೆ ನಂಬಿಕೆಯಿಲ್ಲ. ಸಿ.ಡಿ. ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಇಲ್ಲವೆಂದು ಸೆಷನ್ಸ್ ಕೋರ್ಟ್ಗೆ ವರದಿ ಸಲ್ಲಿಸಲು ಎಸ್ಐಟಿ ಮುಂದಾಗಿದೆ. ವರದಿ ಸಲ್ಲಿಸಲು ಎಸ್ಐಟಿಗೆ ಹೈಕೋರ್ಟ್ ಸಹ ಸೂಚನೆ ನೀಡಿದೆ. ಇದಕ್ಕೆ ತಾವು ಅಸಮ್ಮತಿ ಸೂಚಿಸುವುದಾಗಿ ಬಾಧಿತ ಯುವತಿ ಸುಪ್ರೀಂ ಕೋರ್ಟ್ಗೆ ಅಲವತ್ತುಕೊಂಡಿದ್ದರು. ಸಂತ್ರಸ್ತ ಯುವತಿಯ ಮನವಿಯನ್ನು ಪುರಸ್ಕರಿಸಿ, ಎಸ್ಐಟಿ ವರದಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ.
ಈ ಮಧ್ಯೆ SIT ರಚನೆ ಸರಿಯಿದೆಯೇ ಎಂದು ಖಾತರಿ ಪಡಿಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಎಸ್ಐಟಿ ರಚನೆ ಬಗ್ಗೆ ಹೈಕೋರ್ಟ್ ತೀರ್ಮಾನಿಸಿದ ಬಳಿಕವಷ್ಟೇ ಸೆಷನ್ಸ್ ಕೋರ್ಟ್ನಲ್ಲಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆ ನಡೆಯಲಿದೆ. ಸಿ.ಡಿ. ಪ್ರಕರಣದ ವಿಚಾರಣೆ ಮಾರ್ಚ್ 9ರಂದು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಲಿದೆ.