24 ಸಾವಿರ ಸ್ಟಾರ್ಟಪ್ ಹೊಂದಿರುವ ಬೆಂಗಳೂರು ಸ್ಟಾರ್ಟಪ್ ಕ್ಯಾಪಿಟಲ್, ಕೇಂದ್ರದ ಬಜೆಟ್ ಯಶಸ್ವಿ, ದೂರಗಾಮಿ- ಸಂಸದ ತೇಜಸ್ವಿ ಸೂರ್ಯ
ಈ ಬಾರಿ ಕೇಂದ್ರ ಸರಕಾರ ಮಂಡಿಸಿದ ಆಯವ್ಯಯ ಯಶಸ್ವಿ, ದೂರಗಾಮಿ ಬಜೆಟ್ ಎಂದು ಸಂಸದರು ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಅವರು ತಿಳಿಸಿದರು.
Published: 19th February 2022 10:27 PM | Last Updated: 19th February 2022 10:27 PM | A+A A-

ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: ಈ ಬಾರಿ ಕೇಂದ್ರ ಸರಕಾರ ಮಂಡಿಸಿದ ಆಯವ್ಯಯ ಯಶಸ್ವಿ, ದೂರಗಾಮಿ ಬಜೆಟ್ ಎಂದು ಸಂಸದರು ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಅವರು ತಿಳಿಸಿದರು.
ನಗರದ ಜಯನಗರ 5ನೇ ಬ್ಲಾಕ್‍ನ 11ನೇ ಮುಖ್ಯ ರಸ್ತೆಯ ಸಂಸದರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿಯಿಂದ ವಿಜ್ಞಾನ, ನಗರೀಕರಣದಿಂದ ರೈಲ್ವೆ ಆಧುನೀಕರಣದವರೆಗೆ ಅನುದಾನ ಕೊಡಲಾಗಿದೆ. ಸಣ್ಣ ವ್ಯಾಪಾರಿಗಳಿಗೂ ಪ್ರೋತ್ಸಾಹ, ಯುವಕರಿಗೂ ಉದ್ಯೋಗಾವಕಾಶ, ಎಂಎಸ್‍ಎಂಇಗೆ ಉತ್ತೇಜನ- ಸರ್ವಸ್ಪರ್ಶಿ ಸರ್ವವ್ಯಾಪಿ ಬಜೆಟ್- ಮೋದಿ ಅವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಂದ ಶೇ 50ಕ್ಕಿಂತ ಶೇ 70ರಷ್ಟು ಕಡಿಮೆ ದರದಲ್ಲಿ ಔಷಧಿ ಲಭ್ಯವಿದೆ. ದೇಶದಲ್ಲಿ 8,600 ಜನೌಷಧಿ ಕೇಂದ್ರಗಳಿದ್ದು, ಬೆಂಗಳೂರಿನಲ್ಲಿ ಕಳೆದೊಂದು ವರ್ಷದಲ್ಲಿ 40 ಹೊಸ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಈಗ 69 ಕೇಂದ್ರಗಳಿದ್ದು, ಶೀಘ್ರವೇ ಅದು 75ಕ್ಕೇರಲಿದೆ ಎಂದರು.
ಇಪಿಎಫ್‍ಒದಲ್ಲಿ (ಭವಿಷ್ಯ ನಿಧಿ ಸಂಸ್ಥೆ) ಕಳೆದೊಂದು ವರ್ಷದಲ್ಲಿ 14 ಲಕ್ಷ ಹೊಸ ಚಂದಾದಾರರು ಸೇರಿದ್ದಾರೆ. ಈ ಪೈಕಿ 18ರಿಂದ 25 ವರ್ಷ ವಯೋಮಾನದವರು ಶೇ 50ರಷ್ಟಿದ್ದಾರೆ. ಕರ್ನಾಟಕದಲ್ಲಿ 1.60 ಲಕ್ಷ ಚಂದಾದಾರರು ಇಪಿಎಫ್‍ಒಗೆ ಸೇರಿದ್ದಾರೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಮೂಲಭೂತ ಸೌಕರ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿಯನ್ನು ಶೂನ್ಯ ಬಡ್ಡಿದರದ ಸಾಲ ಪಡೆಯಬಹುದು. ದೇಶದ ಆರ್ಥಿಕತೆ ವೇಗವಾಗಿ ಮುಂದುವರಿಯಲು ಪೂರಕ. ಹಣದುಬ್ಬರ ಹತೋಟಿಯಲ್ಲಿದೆ. ಯುವಕರಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ. 25 ವರ್ಷಗಳ ದೂರದೃಷ್ಟಿ ಹೊಂದಿದ ಕೇಂದ್ರ ಬಜೆಟ್ ಇದೆಂದು ಮೆಚ್ಚುಗೆ ಸೂಚಿಸಿದರು.
ನರೇಂದ್ರ ಮೋದಿಯವರ ಆಗಮನದ ಬಳಿಕ ದೇಶ ಸ್ಟಾರ್ಟಪ್ ಗಳು ಹೆಚ್ಚಾಗಿದ್ದು, ದೇಶದಲ್ಲಿ 61 ಸಾವಿರ ಸ್ಟಾರ್ಟಪ್‍ಗಳು ಆರಂಭವಾಗಿವೆ. ಬೆಂಗಳೂರು ಸ್ಟಾರ್ಟಪ್ ಕ್ಯಾಪಿಟಲ್ ಆಗಿದೆ. 24 ಸಾವಿರ ಸ್ಟಾರ್ಟಪ್‍ಗಳು ಬೆಂಗಳೂರಿನಲ್ಲಿವೆ. 85 ಕಂಪೆನಿಗಳು ಯುನಿಕಾರ್ನ್‍ಗಳಾಗಿವೆ. ಇವು ಮಲ್ಟಿನ್ಯಾಷನಲ್ ಕಂಪೆನಿ ಆಗಿ ಬೆಳೆಯುವ ನಿರೀಕ್ಷೆ ಇದೆ. ಭಾರತದ ಬೆಳೆಯುತ್ತಿರುವ ಆರ್ಥಿಕತೆಯ ಸಂಕೇತ ಇದಾಗಿದೆ ಎಂದು ವಿಶ್ಲೇಷಿಸಿದರು.
ಕೋವಿಡ್ ವೇಳೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿದ್ದಾರೆ. ಜನ್‍ಧನ್ ಯೋಜನೆಯಡಿ 50 ಕೋಟಿ ಹೊಸ ಬ್ಯಾಂಕ್ ಖಾತೆಗಳು ಆರಂಭವಾಗಿದ್ದು, ಬೆಂಗಳೂರಿನಲ್ಲಿ 9.50 ಲಕ್ಷ ಜನರು ಖಾತೆ ತೆರೆದಿದ್ದಾರೆ. ವಿಮಾ ಯೋಜನೆ, ಮುದ್ರಾ ಯೋಜನೆಯಡಿ ಹೊಸ ಖಾತೆಗಳು ಆರಂಭಗೊಂಡ ಕುರಿತು ಮಾಹಿತಿ ನೀಡಿದರು.
ಅಸಂಘಟಿತ ಕಾರ್ಮಿಕರು, ಕೂಲಿ ಕಾರ್ಮಿಕರಿಗಾಗಿ ಅಟಲ್ ಪಿಂಚಣಿ ಯೋಜನೆ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಇದಕ್ಕೆ ಕಳೆದ ಸಾಲಿನಲ್ಲಿ 80 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಉಜ್ವಲ ಯೋಜನೆಯಡಿ 8 ಸಾವಿರ ಜನರು ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎಲ್‍ಪಿಜಿ ಸಬ್ಸಿಡಿ ಬಿಟ್ಟುಕೊಡಲು 8 ಲಕ್ಷ ಜನರು ಮುಂದಾಗಿದ್ದಾರೆ ಎಂದರು.
ಹಿಂದಿನ ದೇಶದ ಆಡಳಿತಕ್ಕೆ ಹೋಲಿಸಿದರೆ ಬೆಂಗಳೂರು, ಕರ್ನಾಟಕ, ದೇಶದ ಆರ್ಥಿಕತೆಯ ದೃಷ್ಟಿಯಿಂದ ನೋಡಿದರೆ ಮೋದಿ ಅವರ ಆಡಳಿತಾವಧಿಯಲ್ಲಿ ಅಭೂತಪೂರ್ವ ಪ್ರಗತಿ ಕಾಣಿಸುತ್ತಿದೆ. ಮೋದಿ ಅವರ ಆಡಳಿತಾವಧಿಯ ಹಿಂದೆ ಹಣದುಬ್ಬರ ತೀವ್ರವಾಗಿತ್ತು. ಇಂದು ಡಿಜಿಟಲ್ ಪೇಮೆಂಟ್ ನೆಟ್ ವರ್ಕ್ ವ್ಯಾಪಕವಾಗಿ ಬಳಕೆಯಾಗುತ್ತಿದೆ.. ವಿಮಾನ, ರೈಲ್ವೆ ಸಂಪರ್ಕವೂ ಹೆಚ್ಚಾಗಿದ್ದು, ಇದು ಅಭಿವೃದ್ಧಿಯ ಸಂಕೇತ. 4 ಕೋಟಿ ಜನರ ಮನೆಗೆ ನಳ್ಳಿನೀರು ಕೊಡುವ ಕಾರ್ಯ ನಡೆದಿದೆ. 2 ಲಕ್ಷ ಅಂಚೆ ಕಚೇರಿಗಳನ್ನು ಬ್ಯಾಂಕ್ ಶಾಖೆಯನ್ನಾಗಿ ಪರಿವರ್ತಿಸಲಾಗುತ್ತಿದೆ. 80 ಲಕ್ಷ ಮನೆ ನಿರ್ಮಾಣ ಕಾರ್ಯ ನಡೆದಿದೆ. ಬೆಂಗಳೂರಿನ ಮೆಟ್ರೊ ಯೋಜನೆ ವಿಸ್ತರಣೆ ಕೆಲಸ ವೇಗವಾಗಿ ನಡೆದಿದೆ. ಸಬರ್ಬನ್ ಯೋಜನೆಯೂ ತ್ವರಿತವಾಗಿ ಮಂಜೂರಾಗಿದೆ. ಗೇಲ್ ವತಿಯಿಂದ ಮನೆಮನೆಗೆ ಗ್ಯಾಸ್ ಸಂಪರ್ಕ ಕೊಡಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಡಾ.ಎನ್.ಆರ್.ರಮೇಶ್, ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರರಾದ ರಾಘವೇಂದ್ರ ರಾವ್ ಅವರು ಉಪಸ್ಥಿತರಿದ್ದರು.