ಭಜರಂಗದಳ ಕಾರ್ಯಕರ್ತನ ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧಿಸಲಾಗುವುದು: ಗೃಹ ಸಚಿವ ಆರಗ ಜ್ಞಾನೇಂದ್ರ
ಜಿಲ್ಲೆಯ ಭಾರತಿ ನಗರ ಕಾಲೊನಿಯಲ್ಲಿ ಕಳೆದ ರಾತ್ರಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷನ ಭೀಕರ ಕಗ್ಗೊಲೆ ಭಾರೀ ಸದ್ದು ಮಾಡುತ್ತಿದೆ. ಸದ್ಯ ಯುವಕ ಹರ್ಷನ ಶವವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದೆ.
Published: 21st February 2022 09:21 AM | Last Updated: 21st February 2022 03:07 PM | A+A A-

ಆರಗ ಜ್ಞಾನೇಂದ್ರ
ಶಿವಮೊಗ್ಗ: ಜಿಲ್ಲೆಯ ಭಾರತಿ ನಗರ ಕಾಲೊನಿಯಲ್ಲಿ ಕಳೆದ ರಾತ್ರಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷನ ಭೀಕರ ಕಗ್ಗೊಲೆ ಭಾರೀ ಸದ್ದು ಮಾಡುತ್ತಿದೆ. ಸದ್ಯ ಯುವಕ ಹರ್ಷನ ಶವವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಯುವಕನ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಇಂದು ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಪಿಗಳ ಸುಳಿವು ಸಿಕ್ಕಿದ್ದು,ಸದ್ಯದಲ್ಲಿಯೇ ಬಂಧಿಸಲಾಗುವುದು. ಯುವಕನ ಕುಟುಂಬಸ್ಥರಿಗೆ ಆತನನ್ನು ಜೀವಂತವಾಗಿ ತರಲು ಸಾಧ್ಯವಿಲ್ಲ. ಆದರೆ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಹಿಜಾಬ್ ವಿವಾದಕ್ಕೂ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಗೂ ಸಂಬಂಧವಿದೆ ಎಂದು ನನಗನಿಸುವುದಿಲ್ಲ. ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ. ತನಿಖೆ ಹಂತದಲ್ಲಿರುವುದರಿಂದ ಯಾರೆಂದು ಹೇಳುವುದಿಲ್ಲ. ಯಾರು ಮಾಡಿದ್ದಾರೆ ಎನ್ನುವುದು ಗೊತ್ತಾಗಿದ್ದು, ಆರೋಪಿಗಳ ಬೆನ್ನತ್ತಿದ್ದು, ಶೀಘ್ರವೇ ಬಂಧಿಸುತ್ತಾರೆ ಎಂಬ ಸಮಾಧಾನ ನಮಗಿದೆ ಎಂದರು.
ಒಟ್ಟು 4ರಿಂದ 5 ಆರೋಪಿಗಳು ಇರಬಹುದು ಎಂಬ ಮಾಹಿತಿಯಿದ್ದು ಇನ್ನಷ್ಟೇ ಖಚಿತವಾಗಬೇಕಿದೆ. ಶಿವಮೊಗ್ಗದಲ್ಲಿ ಇಂತಹ ದುರದೃಷ್ಟಕರ ಘಟನೆಯಾಗಿರುವುದನ್ನು ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಸ್ಪಷ್ಟವಾದ ಸಂದೇಶವನ್ನು ಸರ್ಕಾರ, ಪೊಲೀಸ್ ಇಲಾಖೆ ನೀಡಲಿದೆ ಎಂದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಕಗ್ಗೊಲೆ: ಬೆಚ್ಚಿಬಿದ್ದ ಮಲೆನಾಡು, ಬಿಗುವಿನ ವಾತಾವರಣ, ಶಾಲಾ-ಕಾಲೇಜುಗಳಿಗೆ ರಜೆ
ಭಾವುಕರಾಗಬೇಡಿ: ಇಂತಹ ಘಟನೆಯಲ್ಲಿ ಹತಾಷ ಸ್ಥಿತಿ, ಮಾನಸಿಕವಾಗಿ ಭಾವುಕರಾಗುವುದು ಸಹಜ, ತಾಳ್ಮೆ ಕಳೆದುಕೊಳ್ಳುವುದು ಬೇಡ, ಒಳ್ಳೆಯ ಸಾಮಾಜಿಕ ಕಾರ್ಯಕರ್ತ ಯುವಕನನ್ನು ಕಳೆದುಕೊಂಡಿದ್ದೇವೆ. ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಜನರು ಸಹಕಾರ ನೀಡಬೇಕೆಂದು. ಪೊಲೀಸರ ಜೊತೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಕೊಲೆಯಾದ ಯುವಕನ ವಿರುದ್ಧವೂ ಕೇಸುಗಳಿವೆ: ಹರ್ಷನ ಕೊಲೆಗೆ ಕಾರಣ ತನಿಖೆಯಿಂದ ಹೊರಬರಲಿದೆ, ಆತ ಹಿಂದೂ ಕಾರ್ಯಕರ್ತನಾಗಿದ್ದು ಆರ್ ಎಸ್ಎಸ್ ಕಾರ್ಯಕರ್ತ. ಆತನ ಮೇಲೆ ಕೂಡ ಎರಡ್ಮೂರು ಪ್ರಕರಣಗಳಿದ್ದವು ಎಂಬ ಮಾಹಿತಿ ಗೊತ್ತಾಗಿದ್ದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶಿವಮೊಗ್ಗ ನಗರಕ್ಕೆ ಹಿರಿಯ ಅಧಿಕಾರಿಗಳು ಬಂದಿದ್ದಾರೆ. ಕೆಎಸ್ ಆರ್ ಪಿ, ರ್ಯಾಪಿಡ್ ಆಕ್ಷನ್ ಫೋರ್ಸ್ ಕೂಡ ಸ್ಥಳದಲ್ಲಿದೆ ಎಂದರು.
ಯುವಕನ ಕೊಲೆ ಹಿಂದೆ ಸಂಘಟನೆ ಹಿಂದೆ ಕೈವಾಡವಿದೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಸದ್ಯ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ. ಹರ್ಷನ ಮೇಲೆ ಈ ಹಿಂದೆಯೂ ದಾಳಿಯಾಗಿತ್ತು ಎಂಬ ಮಾಹಿತಿಯಿದೆ. ಪೊಲೀಸರನ್ನು ಅಲರ್ಟ್ ಮಾಡಿದ್ದೇವೆ, ಗಾಂಜಾ, ಮಾದಕ ವಸ್ತುವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮೃತ ಯುವಕ ಹರ್ಷನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ಮಾತನಾಡಿ ಘೋಷಣೆ ಮಾಡುತ್ತೇನೆ ಎಂದರು.