ಬೆಂಗಳೂರು: ಶಾಸಕ ಜಮೀರ್ ಅಹ್ಮದ್, ಸಹೋದರ ಜಮೀಲ್ ವಿರುದ್ದ ಭೂ ಕಬಳಿಕೆ ಆರೋಪ, ಎಫ್ ಐಆರ್ ದಾಖಲು
ಮಾಜಿ ಸಚಿವ ಹಾಗೂ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್, ಅವರ ಸಹೋದರ ಮತ್ತು ಇತರರ ವಿರುದ್ಧ ವಂಚನೆ, ಅತಿಕ್ರಮಣ ಮತ್ತು ಇತರ ಅಪರಾಧಗಳಿಗಾಗಿ ಸಂಪಿಗೆಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Published: 21st February 2022 08:24 AM | Last Updated: 21st February 2022 08:24 AM | A+A A-

ಜಮೀರ್ ಅಹ್ಮದ್ ಖಾನ್
ಬೆಂಗಳೂರು: ಮಾಜಿ ಸಚಿವ ಹಾಗೂ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್, ಅವರ ಸಹೋದರ ಮತ್ತು ಇತರರ ವಿರುದ್ಧ ವಂಚನೆ, ಅತಿಕ್ರಮಣ ಮತ್ತು ಇತರ ಅಪರಾಧಗಳಿಗಾಗಿ ಸಂಪಿಗೆಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಆರ್‌ಟಿ ನಗರದ ನಿವಾಸಿ ಶಾಹಿಸ್ತಾ ನಜೀನ್ ಏಳನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಎಫ್ ಐಆರ್ ದಾಖಲಿಸುವಂತೆ ನ್ಯಾಯಾಲಯ ಡಿಸೆಂಬರ್ ನಲ್ಲಿಯೇ ನಿರ್ದೇಶಿಸಿತ್ತು. ಇದರಿಂದಾಗಿ ಪೊಲೀಸರು ಶನಿವಾರ ದೂರು ದಾಖಲಿಸಿದ್ದಾರೆ.
ಚೊಕ್ಕನಹಳ್ಳಿಯಲ್ಲಿ ನಜೀನ್ ಖಾನೂಮ್, ಎಂಐ ಅತೀಕ್ ಖವಾರ್, ಎಂಐ ತಾರೀಕ್ ಅಂಜುಮ್ ಮತ್ತು ಎಂಐ ಫರೀದ್ ಅಲಿ ಅವರಿಂದ 2015ರ ಆಗಸ್ಟ್ ಮತ್ತು 2018ರ ಮಾರ್ಚ್‌ನಲ್ಲಿ 5 ಸಾವಿರ ಚದರ ಅಡಿ ಭೂಮಿಯನ್ನು ತಮ್ಮ ಪತಿ ಹಾಗೂ ತಾನು ಖರೀದಿಸಿದ್ದು, ಗಾಂಧಿನಗರ ಉಪ ನೋಂದಾಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಲಾಗಿತ್ತು. ನಂತರ ತಮ್ಮ ಪತಿ ವಿದೇಶಕ್ಕೆ ತೆರಳಿದ್ದಾಗಿ ನಜೀನ್ ತಿಳಿಸಿದ್ದಾರೆ.
2021, ಆಗಸ್ಟ್ 4 ರಲ್ಲಿ ನಿವೇಶನದಲ್ಲಿ ತಾನು ಹಾಗೂ ತನ್ನ ಮಗ ಶೆಡ್ ಹಾಕುತ್ತಿದ್ದಾಗ 15-20 ಜನರಿದ್ದ ಗ್ಯಾಂಗ್ ವೊಂದು ಬುಲ್ಡೇಜರ್, ಮಾರಕಾಸ್ತ್ರಗಳಿಂದ ಬಂದು ಅಲ್ಲಿಂದ ತೆರೆಳುವಂತೆ ನಮಗೆ ಎಚ್ಚರಿಕೆ ನೀಡಿದರು. ಇದು ಬಾಸ್ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಸಹೋದರ ಜಮೀಲ್ ಅಹ್ಮದ್ ಖಾನ್ ಗೆ ಸೇರಿದ್ದು, ಏನಾದರೂ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ನಿವೇಶನದಲ್ಲಿ ಖಾಸಗಿ ಬಸ್ ಗಳನ್ನು ಪಾರ್ಕ್ ಮಾಡಿದರು. ಸೆಪ್ಟೆಂಬರ್ 14 ರಂದು ವಿಚಾರಿಸಲೆಂದು ಹೋದಾಗ ಮತ್ತೆ ನಮಗೆ ಬೆದರಿಕೆ ಹಾಕಿದ್ದಾರೆ ಎಂದು ಆ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ ಜಮೀರ್ ಮತ್ತು ಅವರ ಸಹೋದರ 2012ರಲ್ಲಿ ಆ ಭೂಮಿಯನ್ನು ತಮ್ಮ ಸಂಬಂಧಿ ಅತೀಕ್ ಖಾವಾರ್ ಗೆ ಮಾರಾಟ ಮಾಡಿದ್ದಾರೆ. ಖಾವರ್ ಇದೇ ಭೂಮಿಯನ್ನು ನಜೀನ್ ಮತ್ತು ಆಕೆಯ ಪತಿಗೆ ಮಾರಾಟ ಮಾಡಿದ್ದಾರೆ. ಈಗಾಗಲೇ ಮಾರಾಟ ಮಾಡಿದ ಭೂಮಿಯನ್ನು ಕಬಳಿಸಲು ಶಾಸಕ ಜಮೀರ್ ಹಾಗೂ ಅವರ ಸಹೋದರ ಪ್ರಯತ್ನಿಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸರು ಜಮೀರ್ ಅಹ್ಮದ್ ಖಾನ್, ಜಮೀಲ್ ಖಾನ್, ಅತೀಕ್ ಖಾವರ್ ಮತ್ತಿತರ ವಿರುದ್ಧ ವಂಚನೆ, ಅತಿಕ್ರಮಣ, ಹಲ್ಲೆ ಮತ್ತಿತರ ಪ್ರಕರಣದಡಿ ಕೇಸ್ ದಾಖಲಿಸಿದ್ದಾರೆ.