
ಸಿಎಂ ಬೊಮ್ಮಾಯಿ
ಬೆಂಗಳೂರು: ಶುಕ್ರವಾರದ ವರೆಗೆ ನಡೆಯಬೇಕಿದ್ದ ಸದನ ಇಂದೇ ಮೊಟಕುಗೊಂಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಅಧಿವೇಶನದ ಬಳಿಕ ಮಾತನಾಡಿದ ಸಿಎಂ, ಬೇರೆ ಸಮಯದಲ್ಲಿ ಸದನ ಕರೆಯಿರಿ ಅಂತಾರೆ, ಕರೆದ್ರೆ ಚರ್ಚೆನೇ ಮಾಡೊಲ್ಲ. ಇವತ್ತು ಈಶ್ವರಪ್ಪನವರ ಹೇಳಿಕೆ ಬಗ್ಗೆ ವಿಚಾರ ಎತ್ತಬಹುದಾಗಿತ್ತು. ಆದರೆ ಅದನ್ನು ಮಾಡಲಿಲ್ಲ ಎಂದು ಸಿಎಂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಸಚಿವ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಬಿಗಿಪಟ್ಟು: ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ
ಹೈಕೋರ್ಟ್ ನಲ್ಲಿ ಹಿಜಾಬ್ ವಿಚಾರ ವಿಚಾರಣೆ ನಡೆಯುತ್ತಿದೆ. ಮಧ್ಯಂತರ ಆದೇಶ ಮಾಡಿದೆ ಅದನ್ನ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಕಾಂಗ್ರೆಸ್ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಿರಿಯರು. ಅವರ ಅನುಭವ ಎಲ್ಲಿ ಹೊಯಿತು ಎಂದು ಪ್ರಶ್ನೆ ಮಾಡಿದ ಸಿಎಂ, ರಾಜಕಾರಣದ ಮುಸುಕು ಅವರ ಮುಖದ ಮೇಲೆ ಬಿದ್ದಿದೆ. ಖಂಡಿತವಾಗಿ ಮುಂದೆ ಅವರಿಗೆ ರಾಜಕೀಯ ಭವಿಷ್ಯ ಇಲ್ಲ. ಆಡಳಿತ ಪಕ್ಷವಾಗಿ ಅವರು ವಿಫಲವಾಗಿದ್ರು, ಜನ ಅವರನ್ನ ತಿರಸ್ಕರಿಸಿದ್ರು, ಈಗ ವಿಪಕ್ಷವಾಗಿಯೂ ಅವರು ವಿಫಲವಾಗಿದ್ದಾರೆ ಎಂದರು.
ಇನ್ನೂ ಮಾರ್ಚ್ 4 ರಂದು ಬಜೆಟ್ ಮಂಡಿಸಲು ತೀರ್ಮಾನ ಮಾಡಿದ್ದೇವೆ. ಅದಕ್ಕಾಗಿ ಪೂರಕ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಜೆ.ಪಿ.ನಡ್ಡಾ ರವರ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತೆಗೆದುಕೊಂಡು ಮಾತಾಡ್ತಾನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ನಿಂದ ನಿಷ್ಪ್ರಯೋಜಕ ಧರಣಿ – ಸಿಎಂ ಬೊಮ್ಮಾಯಿ
ಕಳೆದ ಹಲವು ದಿನಗಳಿಂದ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಸದಸ್ಯರ ಧರಣಿ ಟೀಕಿಸಿದ ಸಿಎಂ ಬೊಮ್ಮಾಯಿ, ಯಾತಕ್ಕಾಗಿ ನೀವು ಸ್ಟ್ರೈಕ್ ಮಾಡ್ತಾ ಇದ್ದೀರಿ? ಯಾವ ಜನ ಕಲ್ಯಾಣ ಕಾರ್ಯಕ್ರಮಕ್ಕಾಗಿ.. ಯಾವ ರೈತರಿಗಾಗಿ, ಯಾವ ವಿದ್ಯಾರ್ಥಿಗಳಿಗಾಗಿ.. ಯಾವುದಾದ್ರೂ ಒಂದು ಜನಪರ ವಿಷಯ ಇಟ್ಟುಕೊಂಡು ಧರಣಿ ಮಾಡಿದ್ರೆ ಅದಕ್ಕೆ ಅರ್ಥ ಇರುತ್ತೆ ಎಂದ ಸಿಎಂ, ಯಾರಿಗೂ ಇದರಿಂದ ಉಪಯೋಗವಿಲ್ಲ. ನಿಮಗೆ ಖಂಡಿತಾ ಹೇಳುತ್ತಿದ್ದೇನೆ ಇದರಿಂದ ಯಾವುದೇ ರಾಜಕೀಯ ಲಾಭ ಕಾಂಗ್ರೆಸ್ ಗೆ ಆಗಲ್ಲ. ಇದೊಂದು ನಿಷ್ಪ್ರಯೋಜಕ ಧರಣಿ. ಜನರು ಇದನ್ನು ಒಪ್ಪುವುದಿಲ್ಲ ಎಂದರು.
ಈಶ್ವರಪ್ಪ ಹೇಳದೇ ಇರುವ ಮಾತುಗಳನ್ನು ಸೇರಿಸಿಕೊಂಡು ಧರಣಿ ಮಾಡುತ್ತಿದ್ದೀರಿ? ಇದನ್ನು ಜನ ಒಪ್ಪುವುದಿಲ್ಲ. ಇದೇ ವಿಚಾರವನ್ನು ಇಟ್ಟುಕೊಂಡು ನೀವು ಜನರ ಮುಂದೆ ಬನ್ನಿ.. ನಾವು ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಜನರ ಮುಂದೆ ಬರುತ್ತೇವೆ. ಖಂಡಿತವಾಗಿ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ. ಆಡಳಿತ ಪಕ್ಷದಲ್ಲಿರಲು ನಿಮಗೆ ಅವಕಾಶ ಇಲ್ಲ. ಕನಿಷ್ಠ ವಿರೋಧ ಪಕ್ಷದ ಪಾತ್ರವನ್ನಾದ್ರೂ ನಿಭಾಯಿಸಿ. ವಿರೋಧ ಪಕ್ಷವಾಗಿರಲು ನೀವು ಅರ್ಹತೆಯನ್ನು ಕಳೆದುಕೊಂಡಿದ್ದೀರಿ. ನೈತಿಕತೆಯನ್ನು ಕಳೆದುಕೊಂಡಿದ್ದೀರಿ. ರಾಜ್ಯದ ಜನತೆಗೆ ಯಾವ ರೀತಿ ಮುಖವನ್ನು ತೋರಿಸುತ್ತೀರಿ. ನಿಮ್ಮ ಕೇಂದ್ರ ನಾಯಕರನ್ನೇ ಕೇಳಿ.. ನೀವು ಮಾಡ್ತಾ ಇರೋದು ಸರಿನಾ ಅಂತಾ? ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹೋರಾಟ ನಡೆದಾಗ ನಾಲ್ಕು ವರ್ಷ ಧ್ವಜ ಹಾರಲಿಲ್ಲ. ಕಾಂಗ್ರೆಸ್ ಪಕ್ಷ ಆರು ಜನರಿಗೆ ಗುಂಡಿಟ್ಟು ಕೊಂದರು. ರಾಷ್ಟ್ರಧ್ವಜ ಹಾರಬಾರದು ಎಂದು ಸೇನೆಯನ್ನು ಹುಬ್ಬಳ್ಳಿಗೆ ತರಿಸಲಾಗಿತ್ತು. ಇಂಥವರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕಾ? ಯಾವ ನೈತಿಕತೆಯೂ ಕಾಂಗ್ರೆಸ್ ಗೆ ಇಲ್ಲ ಎಂದು ಬೊಮ್ಮಾಯಿ ಕಾಂಗ್ರೆಸ್ ನಡೆಸಿದ ಧರಣಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಸದಸ್ಯರ ಧರಣಿ, ಪ್ರತಿಭಟನೆ ಮಧ್ಯೆಯೇ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯ ಅಂಗೀಕಾರಗೊಂಡು ನಿರ್ಣಯದ ಪ್ರತಿಯನ್ನು ರಾಜ್ಯಪಾಲರಿಗೆ ಕಳಿಸಿಕೊಡಲು ಸಮ್ಮತಿ ನೀಡಲಾಯಿತು. ಬಳಿಕ ವಿಧಾನ ಪರಿಷತ್ ಹಾಗೂ ವಿಧಾನಸಭೆ ಅಧಿವೇಶನವನ್ನು ಮಾರ್ಚ್ 4ಕ್ಕೆ ಮುಂದೂಡಲಾಯಿತು.