ಹರ್ಷ ಹತ್ಯೆ: ಈವರೆಗೆ 6 ಆರೋಪಿಗಳ ಬಂಧನ: ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ.
Published: 22nd February 2022 07:47 PM | Last Updated: 22nd February 2022 07:47 PM | A+A A-

ಹರ್ಷ ಮತ್ತು ಶಿವಮೊಗ್ಗ ಎಸ್ ಪಿ ಬಿ.ಎಂ.ಲಕ್ಷ್ಮೀಪ್ರಸಾದ್
ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ನಿನ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಾಸಿಮ್, ನದೀಮ್ ಎಂಬುವರನ್ನು ಬಂಧಿಸಲಾಗಿತ್ತು, ಉಳಿದ ನಾಲ್ವರು ಆರೋಪಿಗಳನ್ನು ಇಂದು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಶಿವಮೊಗ್ಗ ನಗರದ ನಿವಾಸಿಗಳು. ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದುವರೆಗೆ 13 ಎಫ್ಐಆರ್ ದಾಖಲಾಗಿವೆ ಎಂದು ಹೇಳಿದರು.
ಅಂತೆಯೇ ಹರ್ಷ ಹತ್ಯೆ ಪ್ರಕರಣದ ಬಗ್ಗೆ ಇನ್ನೂ ತನಿಖೆ ಮಾಡಲಾಗುತ್ತಿದೆ. ಎ1, ಎ2 ಆರೋಪಿಗಳನ್ನು ಶಿವಮೊಗ್ಗದಲ್ಲೇ ಬಂಧಿಸಲಾಯಿತು. ನಿನ್ನೆ ಗಲಾಟೆ ವೇಳೆ ಗಾಯಗೊಂಡಿದ್ದಾಗಿ 8 ಜನರಿಂದ ದೂರು ದಾಖಲಿಸಲಾಗಿದ್ದು, 18 ವಾಹನಗಳ ಮೇಲೆ ದಾಳಿ ನಡೆಸಿ ಬೆಂಕಿಯನ್ನೂ ಹಚ್ಚಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
6 ಮಂದಿ ಆರೋಪಿಗಳ ಹೆಸರು ಬಹಿರಂಗ
ಹರ್ಷ ಹತ್ಯೆ ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ಎ1 ಮೊಹಮ್ಮದ್ ಕಾಸಿಫ್, ಎ2 ಸೈಯದ್ ನದೀಮ್, ಎ3 ಆಸಿಫ್ ಉಲ್ಲಾ ಖಾನ್, ಎ4 ರಿಹಾನ್ ಷರೀಫ್, ಎ5 ನಿಹಾನ್, ಎ6 ಅಬ್ದುಲ್ ಅಫ್ನಾನ್ ನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದರು. ಎಲ್ಲಾ 6 ಆರೋಪಿಗಳನ್ನು ಶಿವಮೊಗ್ಗದಲ್ಲೇ ಬಂಧಿಸಲಾಗಿದ್ದು, ಬಂಧಿತ 6 ಆರೋಪಿಗಳ ಪೈಕಿ ನಾಲ್ವರಿಗೆ ಕ್ರಿಮಿನಲ್ ಹಿನ್ನೆಲೆಯಿದೆ. ಗಲಭೆಯಲ್ಲಿ ಭಾಗಿಯಾಗಿದ್ದ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ಹೇಳಿದರು.
ಇಂದು ನಾಲ್ವರು ಅರೆಸ್ಟ್: ಇಬ್ಬರಿಗೆ ನ್ಯಾಯಾಂಗ ಬಂಧನ
ಹರ್ಷ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ನಾಲ್ಕು ಜನರ ಬಂಧನವಾಗಿದ್ದು, ಖಾಸಿಫ್ ಮತ್ತು ನದೀಮ್ ಇಬ್ಬರು ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಉಳಿದ ನಾಲ್ವರು ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಇನ್ನೂ ಅನೇಕರು ಇದ್ದಾರೆ. ತನಿಖೆ ಮುಂದುವರೆದಿದೆ. ಇನ್ನೂ ಬಂಧನ ಸಂಖ್ಯೆ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಹೇಳಿದರು.
ಹರ್ಷ ಕೊಲೆಯಾದ 4 ಗಂಟೆಯಲ್ಲೇ ಆರೋಪಿಗಳ ಬಂಧನ
ಇನ್ನು ಹರ್ಷ ಹತ್ಯೆ ಆರೋಪಿ ಬಂಧನದ ಎಕ್ಸ್ಕ್ಲೂಸಿವ್ ದೃಶ್ಯಗಳು ಲಭ್ಯವಾಗಿದ್ದು, ಕೊಲೆಯಾದ 4 ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಕ್ಲಾರ್ಕ್ ಪೇಟೆಯಲ್ಲಿ ಪೊಲೀಸರು ಭಾನುವಾರ ರಾತ್ರಿಯೇ ಒಬ್ಬ ಆರೋಪಿಯನ್ನ ಬಂಧಿಸಿದ್ದು, ಪೊಲೀಸರು ಈ ಪ್ರಕರಣದ ಸಂಬಂಧ ಇದುವರೆಗೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಖಂಡಿಸಿ ಹಿಂಸಾಚಾರಕ್ಕೆ ತಿರುಗಿತ್ತು. ಉದ್ರಿಕ್ತರು ಹಲವೆಡೆ ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು.