
ಸಂಗ್ರಹ ಚಿತ್ರ
ಮಡಿಕೇರಿ: ತನ್ನದೇ ಪತ್ನಿಯ ನಗ್ನ ಫೋಟೋಗಳನ್ನು ವಾಟ್ಸಪ್ ನಲ್ಲಿ ಶೇರ್ ಮಾಡಿದ್ದ ವ್ಯಕ್ತಿಗೆ ಥಳಿಸಿದ ಇಬ್ಬರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ಹೌದು.. ಕೊಲೆ ಯತ್ನ ಪ್ರಕರಣದಲ್ಲಿ ಇಬ್ಬರು ಸಹೋದರರನ್ನು ಬಂಧಿಸಲಾಗಿದ್ದು, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಈ ಘಟನೆ ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಮಡಿಕೇರಿಯ ಶನಿವಾರಸಂತೆ ಸುಳುಗಳಲೆ ಕಾಲೋನಿ ನಿವಾಸಿ ಅಭಿಲಾಷ ಎಂಬುವವರು, ದಿನಗೂಲಿ ನೌಕರ ರಾಜು ಎಂಬುವರನ್ನು ವಿವಾಹವಾಗಿದ್ದರು. ದಂಪತಿಗಳು ಒಟ್ಟಿಗೆ ಇರುತ್ತಿದ್ದರು. ಆದರೆ ಇತ್ತೀಚೆಗಷ್ಟೇ ರಾಜು ತನ್ನ ನಗ್ನ ಫೋಟೋಗಳನ್ನು ಶೇರ್ ಮಾಡಿದ್ದಾಗಿ ಪತ್ನಿ ಅಭಿಲಾಷ ಆರೋಪಿಸಿದ ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ತಮ್ಮ ವೈಯಕ್ತಿಕ ಫೋಟೋಗಳನ್ನು ಪತಿ ವಾಟ್ಸಾಪ್ ನಲ್ಲಿ ಪರಿಚಯಸ್ಥರಿಗೆ ಹಂಚಿಕೊಂಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ ಅಭಿಲಾಷ ಹಾಗೂ ರಾಜು ನಡುವೆ ಮನಸ್ತಾಪ ಉಂಟಾಗಿತ್ತು. ಘಟನೆಯ ಬಗ್ಗೆ ಅಭಿಲಾಷಾ ತನ್ನ ಸಹೋದರರಾದ ಎಚ್ಪಿ ಮಧುಸೂಧನ್ ಮತ್ತು ಅಭಿಷೇಕ್ ಅವರಿಗೆ ಮಾಹಿತಿ ನೀಡಿ ಅಳಲು ತೋಡಿಕೊಂಡಿದ್ದಾರೆ. ಇದನ್ನು ಕೇಳಿದ ಇಬ್ಬರು ಸಹೋದರರು ಆಕ್ರೋಶದಿಂದ ದಂಪತಿಯ ಮನೆಗೆ ಭೇಟಿ ನೀಡಿ ರಾಜು ಅವರೊಂದಿಗೆ ಜಗಳ ಮಾಡಿದ್ದಾರೆ. ಸೋಮವಾರ ದಂಪತಿಯ ಮನೆಯೊಳಗೆ ಗಲಾಟೆ ನಡೆದಿದ್ದು, ದಂಪತಿಯ ಮಗ ಮತ್ತು ಪಕ್ಕದ ಮನೆಯಲ್ಲಿದ್ದ ರಾಜು ಅವರ ಸಹೋದರ ವೆಂಕಟೇಶ್ ಸ್ಥಳಕ್ಕೆ ಧಾವಿಸಿದ್ದಾರೆ. ಅಭಿಷೇಕ್ ಮತ್ತು ಅಭಿಲಾಷ ಮರದ ದೊಣ್ಣೆ, ಕಬ್ಬಿಣದ ರಾಡ್ ಮತ್ತು ಗುದ್ದಲಿಯಿಂದ ರಾಜುಗೆ ಥಳಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.
ರಾಜುವಿನ ತಂದೆ ಕೆಂಚಪ್ಪ ಸೇರಿದಂತೆ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಜಗಳವನ್ನು ತಡೆದರು. ತಕ್ಷಣ ರಾಜು ಅವರನ್ನು ಶನಿವಾರಸಂತೆ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು, ಈಗ ಹಾಸನ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಸಂಬಂಧ ರಾಜು ಸಹೋದರ ವೆಂಕಟೇಶ್ ದೂರು ದಾಖಲಿಸಿದ್ದಾರೆ. ಅಭಿಲಾಷ ಹಾಗೂ ಆಕೆಯ ಸಹೋದರ ಮಧುಸೂಧನ್ ಅವರನ್ನು ಶನಿವಾರಸಂತೆ ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.