ಹರ್ಷ ಇಲ್ಲದೆ ಬದುಕುವುದು ಹೇಗೆಂದೇ ಗೊತ್ತಾಗುತ್ತಿಲ್ಲ: ಶಿವಮೊಗ್ಗ ಯುವಕ ಹರ್ಷನ ನೆನೆದು ಕಣ್ಣೀರಾದ ತಂದೆ-ತಾಯಿ, ಸೋದರಿಯರು
ನನ್ನ ಮಗನಿಗೆ ಯಾವೊಂದು ಕೆಟ್ಟ ಅಭ್ಯಾಸವೂ ಇರಲಿಲ್ಲ, ಸಮಾಜ ಸುಧಾರಣೆ ಮಾಡಬೇಕೆಂಬುದೊಂದೇ ಅವನ ಉದ್ದೇಶವಾಗಿತ್ತು, ಸಣ್ಣ ವಯಸ್ಸಿನಿಂದಲೇ ಆತ ಹಿಂದೂಪರವಾಗಿದ್ದ. ಅಂತಹ ಒಳ್ಳೆಯ ಹುಡುಗನಿಗೆ ಇಂತಹ ಪರಿಸ್ಥಿತಿ ಬಂತಲ್ಲಾ ಎಂಬುದೇ ನಮ್ಮ ನೋವು ಎಂದು ಮಾಧ್ಯಮಗಳ ಮುಂದೆ ಶಿವಮೊಗ್ಗದಲ್ಲಿ ಹಂತಕರಿಂದ ಹತ್ಯೆಗೀಡಾದ ಯುವಕ ಹರ್ಷನ ತಂದೆ ಅಳಲು ತೋಡಿಕೊಂಡಿದ್ದಾರೆ.
Published: 22nd February 2022 09:57 AM | Last Updated: 22nd February 2022 02:56 PM | A+A A-

ಹತ್ಯೆಗೀಡಾದ ಹರ್ಷ
ಶಿವಮೊಗ್ಗ: ನನ್ನ ಮಗನಿಗೆ ಯಾವೊಂದು ಕೆಟ್ಟ ಅಭ್ಯಾಸವೂ ಇರಲಿಲ್ಲ, ಸಮಾಜ ಸುಧಾರಣೆ ಮಾಡಬೇಕೆಂಬುದೊಂದೇ ಅವನ ಉದ್ದೇಶವಾಗಿತ್ತು, ಸಣ್ಣ ವಯಸ್ಸಿನಿಂದಲೇ ಆತ ಹಿಂದೂಪರವಾಗಿದ್ದ. ಅಂತಹ ಒಳ್ಳೆಯ ಹುಡುಗನಿಗೆ ಇಂತಹ ಪರಿಸ್ಥಿತಿ ಬಂತಲ್ಲಾ ಎಂಬುದೇ ನಮ್ಮ ನೋವು ಎಂದು ಮಾಧ್ಯಮಗಳ ಮುಂದೆ ಶಿವಮೊಗ್ಗದಲ್ಲಿ ಹಂತಕರಿಂದ ಹತ್ಯೆಗೀಡಾದ ಯುವಕ ಹರ್ಷನ ತಂದೆ ಅಳಲು ತೋಡಿಕೊಂಡಿದ್ದಾರೆ.
ನನ್ನ ಮಗನನ್ನ ಕೊಲೆ ಮಾಡಿದವರನ್ನ ಎನ್ ಕೌಂಟರ್ ಮಾಡಿದ್ರೆ ಸಾಲಲ್ಲ ಎಂದು ಹರ್ಷ ತಾಯಿ ಪದ್ಮಾ ಹೇಳಿದ್ದಾರೆ. ಅವರನ್ನ ತುಂಡು ತುಂಡುಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಮನೆಗೂ ಹರ್ಷನಂತಹ ಮಕ್ಕಳು ಹುಟ್ಟಲಿ. ನಮ್ಮ ಸಮಾಜ ಉಳಿಯಲಿ ಎಂದ ಮಗನನ್ನು ಕಳೆದುಕೊಂಡ ನೋವಿನಲ್ಲಿಯೂ ಆಶಯ ವ್ಯಕ್ತಪಡಿಸಿದ್ದಾರೆ.
ನಾನು-ನನ್ನ ಮಗ ಸ್ನೇಹಿತರಂತೆ ಇದ್ದೆವು, ನನ್ನ ದೇಶ, ದೇಶ ಎಂದು ಹೇಳುತ್ತಿದ್ದ,ಹರ್ಷನಂತಹ ಮಕ್ಕಳು ಮನೆಮನೆಗೂ ಹುಟ್ಟಲಿ, ಮನೆಯನ್ನು ಬೆಳಗಲಿ ಎಂದು ಕೇಳಿಕೊಂಡಿದ್ದಾರೆ.
ಇನ್ನು ಹರ್ಷನ ಇಬ್ಬರು ಸೋದರಿಯರು ಕೂಡ ಮಾತನಾಡಿದ್ದಾರೆ. ನಾವಿಬ್ಬರೂ ಹೆಣ್ಣುಮಕ್ಕಳು ಮದುವೆಯಾಗಿ ಹೋಗಿರುವುದರಿಂದ ಹರ್ಷ ಮನೆಯಲ್ಲಿ ಅಮ್ಮನಿಗೆ ಕೆಲಸಕ್ಕೆ ಸಹಾಯ ಮಾಡಿ ಪೋಸ್ಟ್ ಆಫೀಸಿಗೆ ಕೆಲಸಕ್ಕೆ ಹೋಗುತ್ತಿದ್ದ. ಮಧ್ಯಾಹ್ನ 2.30ಗೆ ಮನೆಗೆ ಬರುತ್ತಿದ್ದ. ಅವತ್ತು ರಾತ್ರಿ ಮನೆಯಿಂದ ಹೊರಗೆ ಊಟ ತರಲೆಂದು ಹೋಗಿದ್ದ. ಊಟ ತೆಗೆದುಕೊಂಡು ಬರುತ್ತೇನೆ ಎಂದು ಹೋದವನು ಹೆಣವಾಗಿ ಬಂದನು ಎಂದು ಅತ್ತುಕೊಂಡಿದ್ದಾರೆ.
ನನ್ನ ತಮ್ಮನ ಸಾವಿಗೆ ನ್ಯಾಯ ಕೊಡಿಸಬೇಕು, ನಮ್ಮ ಮನೆಯಲ್ಲಿ ಅವನನ್ನು ಚಿಕ್ಕ ಮಗು ತರ ನೋಡಿಕೊಳ್ಳುತ್ತಿದ್ದೆವು. ನಮ್ಮದು ಚಿಕ್ಕ ಕುಟುಂಬ, ಯಾವಾಗಲೂ ನಗುತ್ತಾ, ತಮಾಷೆ ಮಾಡಿಕೊಂಡಿದ್ದೆವು, ದ್ವೇಷ, ಅಸೂಯೆ ಇರಲಿಲ್ಲ. ನಾನು, ನನ್ನ ತಂದೆ, ತಂಗಿ ಬಿಟ್ಟರೆ ಬೇರೆ ಯಾರಿಗೂ ಅವನು ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ ಎಂದು ತಮ್ಮನ ಒಳ್ಳೆಯ ಗುಣಗಳನ್ನು ನೆನೆದರು.
ಇದನ್ನೂ ಓದಿ: ಪ್ರವಾದಿ ನಿಂದನೆಗೆ ಪ್ರತೀಕಾರ: ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಸಮರ್ಥಿಸಿ ಪೋಸ್ಟ್, ವ್ಯಕ್ತಿ ವಿರುದ್ಧ ಎಫ್ಐಆರ್
ಹರ್ಷ ತುಂಬಾ ಹೆಸರು ಮಾಡಿದ್ದ. ನಮ್ ಹತ್ರ ಏನು ಹೇಳ್ಕೊತಿರಲಿಲ್ಲ, ಬಜರಂಗದಳದಲ್ಲಿ ಸಕ್ರಿಯವಾಗಿ ಓಡಾಡುತ್ತಿದ್ದ, ಆದರೆ ಏನು ಮಾಡುತ್ತಿದ್ದ ಎಂದು ಹೇಳಿಕೊಳ್ಳುತ್ತಿರಲಿಲ್ಲ. ಕುಟುಂಬ ನಿರ್ವಹಣೆಗೆ ತುಂಬಾ ಜವಬ್ದಾರಿ ವಹಿಸಿಕೊಂಡಿದ್ದ ಎಂದು ಮತ್ತೊಬ್ಬ ಸೋದರಿ ಹೇಳಿಕೊಂಡಿದ್ದಾರೆ.
ಅಂದು ರಾತ್ರಿ 8 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದ. 8.30ರ ಸುಮಾರಿಗೆ ಫೋನ್ ಬಂತು, ಅವನ ಸ್ನೇಹಿತರು ಮನೆಗೆ ಬಂದು ಹರ್ಷನಿಗೆ ಏನೋ ಆಗಿದೆ ಎಂದರು, ತಾಯಿಯೂ ಫೋನ್ ಮಾಡಿದರು, ಆಸ್ಪತ್ರೆಗೆ ಹೋಗಿ ನೋಡಿದಾಗ ಅವನ ಮೃತದೇಹವಿತ್ತು ಎಂದರು.
ಅಂದು ಮಧ್ಯಾಹ್ನ ಸ್ನೇಹಿತನೊಬ್ಬ ಸತ್ತುಹೋಗಿದ್ದಾನೆ ಎಂದು ಸ್ಟೇಟಸ್ ಹಾಕಿದ್ದ. ಅಂದು ರಾತ್ರಿ ಅವನೇ ಇಲ್ಲವಾದ. ಅವನ ಜಾಗವನ್ನು ಯಾರಿಗೂ ತುಂಬಲು ಸಾಧ್ಯವಿಲ್ಲ ಎಂದು ಹರ್ಷನ ಸೋದರಿಯರು ಕಣ್ಣೀರು ಹಾಕುತ್ತಿದ್ದಾರೆ.