ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಹ ಟ್ವೀಟ್: ನಟ ಚೇತನ್ಗೆ 14 ದಿನಗಳ ನ್ಯಾಯಾಂಗ ಬಂಧನ, ಪತ್ನಿ ಹೇಳಿದ್ದೇನು?
ನಟ ಚೇತನ್ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ 40ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಿದರು.
Published: 23rd February 2022 11:18 PM | Last Updated: 24th February 2022 12:55 PM | A+A A-

ಚೇತನ್-ಮೇಘಾ
ಬೆಂಗಳೂರು: ಹಿಜಾಬ್ ಪ್ರಕರಣವನ್ನು ಆಲಿಸುತ್ತಿರುವ ಕರ್ನಾಟಕ ಹೈಕೋರ್ಟ್ನ ಪೂರ್ಣಪೀಠದಲ್ಲಿ ನ್ಯಾಯಮೂರ್ತಿಯಾಗಿರುವ ಕೃಷ್ಣ ಎಸ್. ದೀಕ್ಷಿತ್ ಅವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಸಾಮಾಜಿಕ ಹೋರಾಟಗಾರ, ನಟ ಚೇತನ್ ಅವರನ್ನು ಬೆಂಗಳೂರಿನ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಟ ಚೇತನ್ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ 40ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಿದರು.
'ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ. ದೀಕ್ಷಿತ್ ಅವರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಧರಿಸುವ ಕುರಿತಾದ ವಿಚಾರವನ್ನು ನಿರ್ಧರಿಸಲಿದ್ದಾರೆ. ನ್ಯಾ. ದೀಕ್ಷಿತ್ ಅವರಿಗೆ ಅದನ್ನು ನಿರ್ಧರಿಸಲು ಅಗತ್ಯವಾದ ಸ್ಪಷ್ಟತೆ ಇದೆಯೇ' ಎಂದು ಪ್ರಶ್ನಿಸಿ ಚೇತನ್ ಅವರು ಫೆಬ್ರವರಿ 16ರಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ನ್ಯಾಯಾಧೀಶರ ವಿರುದ್ಧ ಟ್ವೀಟ್: ಬೆಂಗಳೂರು ಪೊಲೀಸರಿಂದ ನಟ ಚೇತನ್ ಬಂಧನ!
ಟ್ವೀಟ್ ಆಧರಿಸಿ ಚೇತನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 505(2) (ಕೋಮುಗಳ ನಡುವೆ ವೈಷಮ್ಯ ಸೃಷ್ಟಿ), 504 (ಉದ್ದೇಶಪೂರ್ವಕವಾಗಿ ಅವಮಾನಿಸಿ, ಆ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವುದು) ಅಡಿ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಿಸಿ, ಪೊಲೀಸರು ಅವರನ್ನು ಮಂಗಳವಾರ ಬಂಧಿಸಿದ್ದರು.
ಚೇತನ್ ಕುರಿತು ಪ್ರತಿಕ್ರಿಯಿಸಿರುವ ಪತ್ನಿ ಮೇಘಾ, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಚೇತನ್ ಕ್ಷೇಮವಾಗಿದ್ದಾರೆ. ಅವರು ತುಂಬಾ ಧೈರ್ಯವಂತರು. ಪ್ರಕರಣ ಕುರಿತಂತೆ ನನ್ನ ಕಡೆಯಿಂದ ಲೀಗಲ್ ಟೀಂ ಕೆಲಸ ಮಾಡುತ್ತಿದೆ ಎಂದರು.