
ಕೆಂಪೇಗೌಡ ವಿಮಾನ ನಿಲ್ದಾಣ
ಬೆಂಗಳೂರು: ದುಬೈನಿಂದ ನಗರಕ್ಕೆ ವಾಪಸಾಗುತ್ತಿದ್ದ ಬೆಂಗಳೂರಿಗನೊಬ್ಬನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬೆಂಗಳೂರು ಮೂಲದ ಪ್ರಯಾಣಿಕನೋರ್ವ ಪಾಸ್‌ಪೋರ್ಟ್‌ನಿಂದ ವೀಸಾ ಸ್ಟಾಂಪಿಂಗ್ ಪುಟಗಳನ್ನು ತೆಗೆದುಹಾಕಿದ್ದ. ಡಾಕ್ಯುಮೆಂಟ್ ಎರಡು ತುಂಡುಗಳಲ್ಲಿತ್ತು ಮತ್ತು ಪಾಸ್‌ಪೋರ್ಟ್ ಕಾಯಿದೆಯಡಿಯಲ್ಲಿ ಅದನ್ನು ತಿದ್ದಿದ ಆರೋಪದ ಮೇಲೆ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಸೋಮವಾರ ಎಮಿರೇಟ್ಸ್ ಇಕೆ 564 ವಿಮಾನದಲ್ಲಿ ಆಗಮಿಸಿದ ವಸಂತನಗರ ನಿವಾಸಿ ತರುಣ್ ಕುಮಾರ್ ಅವರ ಪಾಸ್‌ಪೋರ್ಟ್ ನೋಡಿದ ತಕ್ಷಣ ವಲಸೆ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಡಿಸಿಪಿ ಅನೂಪ್ ಶೆಟ್ಟಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಅಧಿಕಾರಿಗಳು ತಿಳಿಸಿರುವಂತೆ ಪಾಸ್ ಪೋರ್ಟ್ ನ ಪುಟ 9, 10, 31, 32 ಮತ್ತು 34 ಹರಿದುಹೋಗಿವೆ ಮತ್ತು ಕಾಣೆಯಾಗಿದೆ. ಅಲ್ಲದೆ, ಪುಟ 3, 4, 5 ಮತ್ತು 6 ಅನ್ನು ಬುಕ್ಲೆಟ್‌ನ ಉಳಿದ ಭಾಗಗಳಿಂದ ಬೇರ್ಪಡಿಸಲಾಗಿದೆ. ಇದು ಪಾಸ್‌ಪೋರ್ಟ್ ಅನ್ನು ತಿದ್ದುವಿಕೆಗೆ ಸಮಾನವಾಗಿದೆ, ಇದು ಗಂಭೀರ ಅಪರಾಧವಾಗಿದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 12 (1) (ಬಿ) ಅಡಿಯಲ್ಲಿ ಅವರ ವಿರುದ್ಧ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಭಾಗವು ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಯಲ್ಲಿ ಮಾಡಿದ ನಮೂದುಗಳನ್ನು ಬದಲಾಯಿಸುವ ಪ್ರಯತ್ನಗಳೊಂದಿಗೆ ವ್ಯವಹರಿಸುತ್ತದೆ ಎಂದು ಹೇಳಿದ್ದಾರೆ.
ತನ್ನ ಪತ್ನಿಯೊಂದಿಗಿನ ಜಗಳದ ಸಂದರ್ಭದಲ್ಲಿ ಬುಕ್‌ಲೆಟ್‌ನಲ್ಲಿರುವ ಪುಟಗಳು ನಾಪತ್ತೆಯಾಗಿವೆ ಎಂದು ಕುಮಾರ್ ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನಿಗೆ ನೋಟಿಸ್ ಜಾರಿ ಮಾಡಿದ್ದಾರೆ. "ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ಹೇಳಿದರು.