ಶಿವಮೊಗ್ಗಕ್ಕೆ ಬಂತು ಡ್ರೋನ್ ಕಣ್ಗಾವಲು, ಕಾನೂನು-ಸುವ್ಯವಸ್ಥೆಗೆ ಕ್ರಮ: ನಗರದಲ್ಲಿ ಸದ್ಯ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ
ಕಳೆದ ಭಾನುವಾರ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರ ನಗರದಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಸೆಕ್ಷನ್ 144 ಹಾಕಿ ನಿಷೇಧಾಜ್ಞೆ ಇನ್ನೆರಡು ದಿನಗಳವರೆಗೆ ಮುಂದುವರಿದಿದೆ.
Published: 23rd February 2022 01:11 PM | Last Updated: 23rd February 2022 01:18 PM | A+A A-

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಕಳೆದ ಭಾನುವಾರ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರ ನಗರದಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಸೆಕ್ಷನ್ 144 ಹಾಕಿ ನಿಷೇಧಾಜ್ಞೆ ಇನ್ನೆರಡು ದಿನಗಳವರೆಗೆ ಮುಂದುವರಿದಿದೆ.
ಇದೀಗ ಹೆಚ್ಚಿನ ಭದ್ರತೆಗೆ ಮಲೆನಾಡು ಶಿವಮೊಗ್ಗಕ್ಕೆ ನಕ್ಸಲ್ ನಿಗ್ರಹ ದಳ ಆಗಮಿಸಿದೆ. ಉಡುಪಿ ಜಿಲ್ಲೆ ಕಾರ್ಕಳದ ANF ಕ್ಯಾಂಪ್ ನಿಂದ ನಕ್ಸಲ್ ನಿಗ್ರಹ ದಳ ಬಂದಿದ್ದು ಸುಸಜ್ಜಿತ 2 ಡ್ರೋನ್ ಕ್ಯಾಮರಾವನ್ನು ತರಲಾಗಿದೆ. ಡ್ರೋನ್ ಕ್ಯಾಮರಾ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತದೆ. ಜನರ ಚಲನವಲನ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ದಳವನ್ನು ತರಿಸಲಾಗಿದ್ದು ಕಾನೂನಿಗೆ ಧಕ್ಕೆಯಾದರೆ ಅಲ್ಲಿಗೆ ಎಎನ್ಎಫ್ ಹಾಜರಾಗುತ್ತದೆ.
ಶಿವಮೊಗ್ಗ ನಗರದಲ್ಲಿ ಸದ್ಯ ಕರ್ಫ್ಯೂ ಜಾರಿಯಲ್ಲಿದೆ. ಹೀಗಿರುವಾಗ ಯಾರಾದರೂ ಓಡಾಡುವುದು ಕಂಡುಬಂದರೆ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ, ವಾಹನಗಳಿಗೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡಿದರೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗುತ್ತದೆ. ಡ್ರೋನ್ ಹಾರಾಡಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಖುದ್ದು ಜಿಲ್ಲಾಧಿಕಾರಿ ಸೆಲ್ವಮಣಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣದಲ್ಲಿ ಈವರೆಗೆ 8 ಮಂದಿ ಬಂಧನ, ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರಿಕೆ: ಆರಗ ಜ್ಞಾನೇಂದ್ರ
ಶಿವಮೊಗ್ಗ ಸಿಟಿಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಹಾರಾಟ ಮಾಡಲಿದ್ದು, ಅಲ್ಲಿನ ಸ್ಥಿತಿಗತಿ ಬಗ್ಗೆ ಇದರಿಂದ ಮಾಹಿತಿ ಸಿಗುತ್ತದೆ. ಡ್ರೋನ್ ಗಳನ್ನು ನಗರದ ಸುತ್ತಮುತ್ತ ವಿಚಕ್ಷಣೆಗೆ , ಕಾನೂನು ಸುವ್ಯವಸ್ಥೆಗೆ ತರಿಸಲಾಗಿದೆ. ಜನರು ಹೊರಗೆ ಬಂದು ಗುಂಪು ಸೇರುತ್ತಾರೆಯೇ ಎಂದು ನೋಡಲು ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ತಿಳಿಸಿದ್ದಾರೆ.
14 ಎಫ್ಐಆರ್ ದಾಖಲು: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಕಲ್ಲು ತೂರಾಟದ ಘಟನೆಗಳಿಗೆ ಸಂಬಂಧಿಸಿದಂತೆ 14 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
ಪರಿಸ್ಥಿತಿ ಶಾಂತವಾಗಿದೆ: ಸದ್ಯ ಶಿವಮೊಗ್ಗದಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ, ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಅದಕ್ಕಾಗಿ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ. ಈ ಸಮಯದಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣ: ಪೊಲೀಸ್ ತನಿಖೆಯ ಮಾಹಿತಿ ಆಧರಿಸಿ ಬೇರೆ ಸಂಸ್ಥೆಗೆ ವಹಿಸುವ ನಿರ್ಧಾರ- ಸಿಎಂ ಬೊಮ್ಮಾಯಿ
ಹರ್ಷ ಕೊಲೆಗೆ ಸಂಬಂಧಿಸಿ ಅಧಿಕೃತವಾಗಿ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಇತರರನ್ನು ವಿಚಾರಣೆ ನಡೆಸಲಾಗುತ್ತಿದೆ, ಎಲ್ಲಾ ಕೋನಗಳಲ್ಲಿ ತನಿಖೆ ನಡೆಯುತ್ತಿದೆ. ಇಬ್ಬರು ಎಡಿಜಿಪಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಪಡೆ ತನಿಖೆ ನಡೆಸುತ್ತಿದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜನಜೀವನ ಸಹಜ ಸ್ಥಿತಿಗೆ ಬರಲು ಶ್ರಮಿಸಲಾಗುತ್ತಿದೆ. ನಮ್ಮಲ್ಲಿ ಸಾಕಷ್ಟು ಪೊಲೀಸ್ ಬಲವಿದೆ. ಕೆಎಸ್‌ಆರ್‌ಪಿ, ಆರ್‌ಎಎಫ್‌ನ 20 ತುಕಡಿಗಳಿವೆ. ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬಲು ನಿನ್ನೆಯೂ ಧ್ವಜ ಮೆರವಣಿಗೆ ನಡೆಸಿದ್ದೇವೆ ಎಂದು ಪೂರ್ವ ವಲಯದ ಡಿಐಜಿ ಡಾ.ಕೆ.ತ್ಯಾಗರಾಜನ್ ತಿಳಿಸಿದ್ದಾರೆ.