ಕೇರಳ ಭಯೋತ್ಪಾದನೆ ಮಾದರಿಯಲ್ಲಿ ಹರ್ಷ ಹತ್ಯೆ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇರಳ ಭಯೋತ್ಪಾದನೆ ಮಾದರಿಯಲ್ಲಿ ನಡೆದಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
Published: 23rd February 2022 12:34 PM | Last Updated: 23rd February 2022 01:15 PM | A+A A-

ಹರ್ಷ ನಿವಾಸಕ್ಕೆ ತೇಜಸ್ವಿ ಸೂರ್ಯ ಭೇಟಿ
ಶಿವಮೊಗ್ಗ: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇರಳ ಭಯೋತ್ಪಾದನೆ ಮಾದರಿಯಲ್ಲಿ ನಡೆದಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮಂಗಳವಾರ ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದರು. ಹರ್ಷ ತಾಯಿ, ತಂದೆ, ಸಹೋದರಿಯರಿಗೆ ಸಾಂತ್ವನ ಹೇಳಿ ಯುವಮೋರ್ಚಾ ವತಿಯಿಂದ 5 ಲಕ್ಷ ರೂ. ಚೆಕ್ ನೀಡಿದರು. ಈ ವೇಳೆ ಯುವ ಮೋರ್ಚಾದ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು, ಬಿಜೆವೈಎಂ ಕಾರ್ಯಕರ್ತರೊಂದಿಗೆ ಹರ್ಷ ಪೋಷಕರನ್ನು ಭೇಟಿ ಮಾಡಿದೆವು. ಕರ್ನಾಟಕದಲ್ಲಿ ಬೆಳೆಯುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಅವರನ್ನು ಬಲಿ ಪಡೆದಿದೆ. ಇದು ಕೇರಳ ಮಾದರಿ ಭಯೋತ್ಪಾದನೆ. ಪಿಎಫ್ಐ, ಎಸ್‌ಡಿಪಿಐ, ಸಿಪಿಐ ಮುಂತಾದ ಸಂಘಟನೆಗಳನ್ನು ಕರ್ನಾಟಕ ಮತ್ತು ದೇಶದ ಇತರ ಭಾಗಗಳಿಗೆ ರಫ್ತು ಮಾಡಲಾಗಿದೆ ಎಂದು ಆರೋಪಿಸಿದರು.
"ನಾನು ಮುಖ್ಯಮಂತ್ರಿಗಳು ಮತ್ತು ಶಿವಮೊಗ್ಗ ಪೊಲೀಸರಿಗೆ ಮನವಿ ಮಾಡುತ್ತೇನೆ. ಆರೋಪಿಗಳ ವಿರುದ್ಧ ಕೇವಲ ಕೊಲೆ ಪ್ರಕರಣವಲ್ಲ ಯುಎಪಿಎ ಅಡಿ ಪ್ರಕರಣ ದಾಖಲು ಮಾಡಿ, ಇದನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿ. ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ರಾಜ್ಯ ಗುಪ್ತಚರ ಇಲಾಖೆ ಅಡಿ ಒಂದು ಸಂಸ್ಥೆಯನ್ನು ಸ್ಥಾಪನೆ ಮಾಡಿ, ಅಗತ್ಯ ಸೌಕರ್ಯ ಕಲ್ಪಿಸಿ" ಎಂದರು.