ಹಿಜಾಬ್ ವಿವಾದ: ಸಿಎಫ್ಐ ಪಾತ್ರದ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದ ಹೈಕೋರ್ಟ್
ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್ಐ) ಪಾತ್ರದ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.
Published: 23rd February 2022 05:59 PM | Last Updated: 23rd February 2022 05:59 PM | A+A A-

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು
ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್ಐ) ಪಾತ್ರದ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.
ಜನವರಿ 1 ರಂದು ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡದ ಕಾಲೇಜು ಆಡಳಿತ ಮಂಡಳಿ ನಿರ್ಧಾರ ವಿರೋಧಿಸಿ ಕರಾವಳಿ ಪಟ್ಟಣದಲ್ಲಿ ಸಿಎಫ್ಐ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ: ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ಹಾಕಬಹುದು, ತರಗತಿ ಸಮಯದಲ್ಲಲ್ಲ: ಹೈಕೋರ್ಟ್ ಗೆ ಸರ್ಕಾರದ ವಿವರಣೆ
ಇದಾದ ನಾಲ್ಕು ದಿನಗಳ ನಂತರ ಅವರು ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಕೋರಿದರು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಕ್ಯಾಂಪಸ್ಗೆ ಬರುತ್ತಿದ್ದರು. ಆದರೆ ಅದನ್ನು ತೆಗೆದು ತರಗತಿಗೆ ಹಾಜರಾಗುತ್ತಿದ್ದರು ಎಂದು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು ತಿಳಿಸಿದ್ದಾರೆ.
"ಕಳೆದ 35 ವರ್ಷಗಳಿಂದ ಹಿಜಾಬ್ ಧರಿಸುವ ಬಗ್ಗೆ ಸಂಸ್ಥೆಯು ಯಾವುದೇ ನಿಯಮವನ್ನು ಹೊಂದಿಲ್ಲ, ಏಕೆಂದರೆ ಅದನ್ನು ಯಾರೂ ತರಗತಿಗೆ ಒಳಗೆ ಧರಿಸುತ್ತಿರಲಿಲ್ಲ. ಈಗ ಹಿಜಾಬ್ ಬೇಡಿಕೆಯೊಂದಿಗೆ ಬಂದ ವಿದ್ಯಾರ್ಥಿಗಳಿಗೆ ಹೊರಗಿನ ಶಕ್ತಿಗಳ ಬೆಂಬಲವಿದೆ" ಎಂದು ರುದ್ರಗೌಡ ಹೇಳಿದ್ದಾರೆ ಎಂದು ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಮತ್ತು ಅದರ ಪ್ರಾಂಶುಪಾಲರು, ಶಿಕ್ಷಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್ಎಸ್ ನಾಗಾನಂದ್ ಅವರು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಪೂರ್ಣ ಪೀಠಕ್ಕೆ ತಿಳಿಸಿದ್ದಾರೆ.
ಸಮವಸ್ತ್ರ ಸಂಹಿತೆಯನ್ನು ಹೊಸದಾಗಿ ಕಾಲೇಜು ಜಾರಿಗೊಳಿಸಿಲ್ಲ. 2018ರಲ್ಲೂ ಹಿಂದಿನಂತೆಯೇ ಸಮವಸ್ತ್ರದ ಬಗ್ಗೆ ನಿರ್ಧರಿಸಲಾಗಿದೆ. 2021ರ ಡಿಸೆಂಬರ್ನಲ್ಲಿ ಹಿಜಾಬ್ಗೆ ಅನುಮತಿ ಕೋರಿದ್ದರು. ಸಿಎಫ್ಐನವರು ಗಲಾಟೆ ಆರಂಭಿಸಿ, ಪ್ರತಿಭಟನೆ ಮಾಡಿದ್ದರು. CFI ಅಂದರೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ. ಇವರೇ ಡೋಲು ಬಾರಿಸಿ, ಹಿಜಾಬ್ ಬೇಕೆಂದು ಪ್ರತಿಭಟಿಸುತ್ತಿದ್ದಾರೆ/ ಸಿಎಫ್ಐನವರೇ ಕಾಲೇಜಿನಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ನಾಗಾನಂದ್ ವಾದಿಸಿದರು.
ಆಗ ಮುಖ್ಯ ನ್ಯಾಯಮೂರ್ತಿ ಅವಸ್ತಿ ಅವರು ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು? ಅದಕ್ಕೆ ನಾಗಾನಂದ್ ಅವರು ಇಂಟೆಲಿಜೆನ್ಸ್ ಬ್ಯೂರೋಗೆ ಮಾಹಿತಿ ಇದೆ ಎಂದು ಹೇಳಿದರು.
ಆಗ ಮುಖ್ಯ ನ್ಯಾಯಮೂರ್ತಿ ಅವಸ್ತಿ ಅವರು, ಈ ಬಗ್ಗೆ ಮಾಹಿತಿ ನೀಡುವಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸೂಚಿಸಿದರು.