ಮುಸುಕು ಧರಿಸುವುದಕ್ಕೆ ಮಹಾತ್ಮಾ ಗಾಂಧಿ ವಿರೋಧವಿತ್ತು, ಆದರೆ ಹಿಜಾಬ್ ಗೆ ಬೆಂಬಲ ನೀಡುತ್ತಿದ್ದರು: ಮರಿ ಮೊಮ್ಮಗ ತುಷಾರ್ ಗಾಂಧಿ
ಅದು 1927ರ ಸಮಯ, ಅಂದು ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಹೆಣ್ಣು ಮಕ್ಕಳು ತಲೆಗೆ ಶಾಲು, ಸೆರಗು ಹೊದ್ದುಕೊಳ್ಳುವುದು, ಹಿಜಾಬ್ ಹಾಕುವುದನ್ನು, ತಲೆಗೆ ಮುಖಕ್ಕೆ ಮುಸುಕು ಹಾಕಿಕೊಳ್ಳುವುದು ಹೀನ ಪದ್ಧತಿ ಎಂದು ಕರೆದಿದ್ದರು. ಅದು ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗೆ ಹಾನಿ ಎಂಬುದು ಅವರ ಯೋಚನೆಯಾಗಿತ್ತು.
Published: 23rd February 2022 09:25 AM | Last Updated: 23rd February 2022 01:09 PM | A+A A-

ಮಹಾತ್ಮಾ ಗಾಂಧಿ ತಮ್ಮ ಪತ್ನಿ ಕಸ್ತೂರ್ಬಾ ಗಾಂಧಿ ಜೊತೆ ಯುವ ವಯಸ್ಸಿನಲ್ಲಿ
ಬೆಂಗಳೂರು: ಅದು 1927ರ ಸಮಯ, ಅಂದು ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು(Mahatma Gandhi) ಹೆಣ್ಣು ಮಕ್ಕಳು ತಲೆಗೆ ಶಾಲು, ಸೆರಗು ಹೊದ್ದುಕೊಳ್ಳುವುದು, ಹಿಜಾಬ್(Hijab) ಹಾಕುವುದನ್ನು, ತಲೆಗೆ ಮುಖಕ್ಕೆ ಮುಸುಕು ಹಾಕಿಕೊಳ್ಳುವುದು ಹೀನ ಪದ್ಧತಿ ಎಂದು ಕರೆದಿದ್ದರು. ಅದು ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗೆ ಹಾನಿ ಎಂಬುದು ಅವರ ಯೋಚನೆಯಾಗಿತ್ತು.
ಆದರೆ ಹೆಣ್ಣು ಮಕ್ಕಳು ಅವರ ಸ್ವಇಚ್ಛೆಯಿಂದ ಹಿಜಾಬ್ ಧರಿಸುತ್ತಿದ್ದರೆ ಅದನ್ನು ವಿರೋಧಿಸುತ್ತಿರಲಿಲ್ಲ. ಇಂದು ಗಾಂಧಿಯವರಿದ್ದಿದ್ದರೆ ಕರ್ನಾಟಕದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಪರ ನಡೆಸುತ್ತಿರುವ ಹೋರಾಟ, ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದರು ಎಂದು ಹೇಳುತ್ತಾರೆ ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ, ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕರಾಗಿರುವ ತುಷಾರ್ ಗಾಂಧಿ. (Tushar Gandhi)
ಅವರು ಬರೆದಿದ್ದ '‘Let’s Kill Gandhi!’ ಪುಸ್ತಕ 2007ರಲ್ಲಿ ಮುದ್ರಣಗೊಂಡು ಈ ವರ್ಷ ಮರುಮುದ್ರಣ ಕಾಣುತ್ತಿದೆ. ತಮ್ಮ ಮುತ್ತಜ್ಜಿ ಮಹಾತ್ಮಾ ಗಾಂಧಿಯವರ ಪತ್ನಿ ಕಸ್ತೂರ್ಬಾ ಗಾಂಧಿಯವರ 78ನೇ ಪುಣ್ಯತಿಥಿ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಗಾಂಧೀಜಿಯವರು ಮಹಿಳೆಯರಿಗೆ ಮುಸುಕು ಹಾಕುವುದು ಅವರ ಮೇಲೆ ದಬ್ಬಾಳಿಕೆ ಎಂದು ಟೀಕಿಸಿದ್ದರು, ಆದರೆ ಅವರು ಹಿಜಾಬ್ ಪರ ಹೋರಾಟ ನಡೆಸುವ ಹೆಣ್ಣುಮಕ್ಕಳ ಪರವಾಗಿ ನಿಲ್ಲುತ್ತಿದ್ದರು. ಹಿಜಾಬ್ ಧರಿಸುವುದು ಹೆಣ್ಣುಮಕ್ಕಳ ಮೇಲೆ ಬಲವಂತದ ಹೇರಿಕೆಯಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಿದ್ದರು ಎನ್ನುತ್ತಾರೆ ತುಷಾರ್ ಗಾಂಧಿ.
ಪದ್ಧತಿ, ಆಚರಣೆಗಳನ್ನು ಕಾನೂನುಗಳ ಮೂಲಕ ಹೇರಬಾರದು, ಅದು ಸ್ವ ಇಚ್ಛೆಯಿಂದ ಹುಟ್ಟಿಕೊಳ್ಳಬೇಕು ಎಂಬುದು ಗಾಂಧಿಯವರ ನಂಬಿಕೆಯಾಗಿತ್ತು. ಗಾಂಧೀಜಿಯವರು ತಮ್ಮ ಜೀವನದಲ್ಲಿ ಗೋವಿನ ಸೇವಕರಾಗಿದ್ದರೂ ಕೂಡ ಗೋ ಹತ್ಯೆ ನಿಷೇಧವನ್ನು ವಿರೋಧಿಸಿದ್ದರು. ಗೋವು ಮಾತೆಗೆ ಸಮಾನವಾದರೂ ಹಲವರಿಗೆ ಅದು ಆಹಾರವಾಗಿದೆ. ಹಾಗಿರುವಾಗ ಗೋಹತ್ಯೆ ನಿಷೇಧ ಮಾಡಬೇಕು ಎಂದು ಹೇಳಲು ಹೇಗೆ ಸಾಧ್ಯ ಎನ್ನುತ್ತಿದ್ದರು ಎಂದು ತುಷಾರ್ ಗಾಂಧಿ ಹೇಳುತ್ತಾರೆ.
ಇದನ್ನೂ ಓದಿ: ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ಹಾಕಬಹುದು, ತರಗತಿ ಸಮಯದಲ್ಲಲ್ಲ: ಹೈಕೋರ್ಟ್ ಗೆ ಸರ್ಕಾರದ ವಿವರಣೆ
ಕರ್ನಾಟಕದಲ್ಲಿ ಹಿಜಾಬ್ ವಿವಾದ ಆರಂಭವಾದಾಗಿನಿಂದ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗಿದೆ, ದೇಶದಲ್ಲಿ ಕೋಮು ಸೌಹಾರ್ದತೆಗೆ ಭಂಗ ಆಗುವುದನ್ನು ಕಂಡಿದ್ದರೆ, ದ್ವೇಷ, ಅಸೂಯೆಯನ್ನು ನೋಡಿದ್ದರೆ ಮಹಾತ್ಮಾ ಗಾಂಧಿಯವರಿಗೆ ತೀವ್ರ ಬೇಸರವಾಗುತ್ತಿತ್ತು. ಭಾರತ ಯಾವತ್ತಿಗೂ ಜಾತ್ಯತೀತ ದೇಶವಾಗಿ ಉಳಿಯಬೇಕೆಂಬುದು ಅವರ ನಂಬಿಕೆಯಾಗಿತ್ತು. ಅವರ ಹತ್ಯೆಯಾಗಿರದಿದ್ದರೆ ಭಾರತದಿಂದ ಪಾಕಿಸ್ತಾನಕ್ಕೆ ಹಿಂದೂಗಳನ್ನು ಕರೆದೊಯ್ದು ಅವರು ತಲೆಮಾರುಗಳಿಂದ ವಾಸಿಸುತ್ತಿದ್ದ ಹಿಂದೂಗಳಿಗೆ ಭೂಮಿಯಲ್ಲಿ ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಒತ್ತಾಯಿಸುತ್ತಿದ್ದರು ಎಂಬ ಮಾತನ್ನು ಕೂಡ ತುಷಾರ್ ಗಾಂಧಿ ಹೇಳಿದ್ದಾರೆ. ಅದೇ ರೀತಿ ಪಾಕಿಸ್ತಾನದಲ್ಲಿದ್ದ ಮುಸ್ಲಿಂರನ್ನು ಭಾರತಕ್ಕೆ ಕರೆತರುತ್ತಿದ್ದರು.
1948ರ ಫೆಬ್ರವರಿಯಲ್ಲಿ ಗಾಂಧೀಜಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ನಿರ್ಧರಿಸಿದ್ದರು. ಆದರೆ ದುರದೃಷ್ಟವಶಾತ್ ಸಾಧ್ಯವಾಗಿರಲಿಲ್ಲ. ಗಾಂಧಿಯವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇನ್ನಷ್ಟು ವರ್ಷಗಳ ಕಾಲ ಬದುಕುಳಿದಿದ್ದಿದ್ದರೆ ಇನ್ನಷ್ಟು ಅದ್ಭುತ ಕೆಲಸಗಳನ್ನು ಮಾಡುತ್ತಿದ್ದರು ಎಂದು ತಮ್ಮ ಮುತ್ತಜ್ಜನನ್ನು ಹೊಗಳುತ್ತಾರೆ.
ಇದನ್ನೂ ಓದಿ: ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ: ಹೈಕೋರ್ಟ್ ಗೆ ನಿಲುವು ಸ್ಪಷ್ಟಪಡಿಸಿದ ರಾಜ್ಯ ಸರ್ಕಾರ
ಇನ್ನು ಮಹಾತ್ಮಾ ಗಾಂಧಿಯವರ ಪತ್ನಿ ಕಸ್ತೂರ್ಬಾ ಗಾಂಧಿಯವರ ಬಗ್ಗೆ ಕೂಡ ತುಷಾರ್ ಮಾತನಾಡಿದ್ದಾರೆ. ಕಸ್ತೂರ್ಬಾ ಗಾಂಧಿ ಎಂಬ ಮಹಿಳೆ ಒಂದು ಶಕ್ತಿ. ಆಗಿನ ಕಾಲದಲ್ಲಿ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿತ್ತು. ಆದರೆ ಕಸ್ತೂರ್ಬಾ ಅವರಿಗೆ ತಮ್ಮ ಮೇಲೆ ನಂಬಿಕೆಯಿತ್ತು. ತಮ್ಮ ಪತಿಯನ್ನು ಅನುಸರಿಸುತ್ತಿದ್ದ ಕಸ್ತೂರ್ಬಾ ಅವರಿಗೆ ತಮ್ಮದೇ ಆದ ನಿಲುವುಗಳಿದ್ದವು. ಗಾಂಧಿಯವರ ಬದ್ಧತೆ ಮನಗಂಡ ಮೇಲೆ ಅವರನ್ನು ಬೆಂಬಲಿಸುತ್ತಿದ್ದರು.
ಕಸ್ತೂರ್ಬಾ ಅವರ ಬೆಂಬಲ, ಕೊಡುಗೆಯಿಲ್ಲದೆ ಗಾಂಧಿಯವರು ಏನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಕಸ್ತೂರ್ಬಾ ನಿಧನರಾದ ಮೇಲೆ ಅದನ್ನು ಗಾಂಧಿಯವರೇ ಅರಿತುಕೊಂಡರು. ಕಸ್ತೂರ್ಬಾ ಅವರ ಶಕ್ತಿಯನ್ನು ಅರಿತುಕೊಳ್ಳಲು ನಾವು ವಿಫಲವಾದೆವು, ಅದು ಬಾಪು ಅವರ ಜನಪ್ರಿಯತೆಯೊಳಗೆ ಮುಚ್ಚಿ ಹೋಯಿತು ಎಂದು ತುಷಾರ್ ಹೇಳುತ್ತಾರೆ. ತುಷಾರ್ ಗಾಂಧಿ ಬರೆದಿರುವ ‘The Lost Diary of Kastur, my Ba’ ಸದ್ಯದಲ್ಲಿಯೇ ಪ್ರಕಟವಾಗಲಿದೆ.
ಕಸ್ತೂರ್ಬಾ ಅವರು 1944ರ ಫೆಬ್ರವರಿ 22ರಂದು ನಿಧನರಾದರು. ಅದು ಪುಣೆಯ ಅಘ ಖಾನ್ ಅರಮನೆಯ ಶಿಬಿರ ತಾಣದಲ್ಲಿ ತಮ್ಮ ಪತಿಯ ಮುಂದೆಯೇ ಗತಿಸಿಹೋದರು. https://pod.link/kastur ನಲ್ಲಿ ತುಷಾರ್ ಅವರು ರಚಿಸಿರುವ 6 ಅಧ್ಯಾಯಗಳ ಜೀವನಚರಿತ್ರೆ ಕಸ್ತೂರ್ಬಾ ಅವರ ಪುಣ್ಯತಿಥಿ ಸಮಯದಲ್ಲಿ ಬಿಡುಗಡೆಯಾಗಿದೆ.