ವಕೀಲ ಜಗದೀಶ್ ವಿರುದ್ಧದ ಪ್ರಕರಣ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವಕೀಲ ಕೆ ಎನ್ ಜಗದೀಶ್ ಕುಮಾರ್ ಅಲಿಯಾಸ್ ಜಗದೀಶ್ ಮಹದೇವ್ ಅವರ ವಿರುದ್ಧ ಪ್ರಕರಣಗಳನ್ನು ಕೈಬಿಡಲು ಆಗ್ರಹಿಸಲಾಗಿದೆ.
Published: 25th February 2022 11:27 PM | Last Updated: 26th February 2022 01:49 PM | A+A A-

ಜಗದೀಶ್
ಬೆಂಗಳೂರು: ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವಕೀಲ ಕೆ ಎನ್ ಜಗದೀಶ್ ಕುಮಾರ್ ಅಲಿಯಾಸ್ ಜಗದೀಶ್ ಮಹದೇವ್ ಅವರ ವಿರುದ್ಧ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ʼಭ್ರಷ್ಟಾಚಾರದ ವಿರುದ್ಧ ನಾವುʼ ವೇದಿಕೆ ಅಡಿ ಪ್ರತಿಭಟನೆ ನಡೆಸಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಮತ್ತು ಇತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಗದೀಶ್ ಅವರ ವಿರುದ್ಧ ದಾಖಲಿಸಿರುವ ಜಾತಿ ನಿಂದನೆ ಹಾಗೂ ಇತರೆ ಪ್ರಕರಣಗಳನ್ನು ಕೈಬಿಟ್ಟು, ಅವರ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಕೋರಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ನಿರ್ದೇಶನದ ಮೇರೆಗೆ ಜಗದೀಶ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಠಿಣವಾದ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಜಗದೀಶ್ ಮತ್ತು ಅವರ ಪುತ್ರ ಆರ್ಯ ಗೌಡ ಮತ್ತಿತರರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಿ, ಜೈಲಿಗೆ ಕಳುಹಿಸುವ ಕೆಲಸವಾಗಿಲ್ಲ. ಇದು ಪೊಲೀಸ್ ಇಲಾಖೆಯ ಪಕ್ಷಪಾತ ಮತ್ತು ನ್ಯಾಯ ವಿರೋಧಿ ಧೋರಣೆಗೆ ದ್ಯೋತಕವಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಪೊಲೀಸರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಮಾಯಕರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಹಿಂಸಿಸುತ್ತಿದ್ದಾರೆ. ಇದರಲ್ಲಿ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ದಲಿತ ಯುವಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಅವರು ಮೂತ್ರ ಕುಡಿಸಿದ ಪ್ರಕರಣವು ಸೇರಿದೆ. ಹೀಗಾಗಿ, ಕಾನೂನು ದುರ್ಬಳಕೆಗೆ ಇಳಿದಿರುವ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ಅಮಾಯಕರ ವಿರುದ್ಧದ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.
ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಸಲೀಂ ಅವರು ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್ಯು), ಕೆಆರ್ಎಸ್ ಪಕ್ಷದ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ, ಆಮ್ ಆದ್ಮಿ ಪಕ್ಷದ ಮುಖಂಡರು, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.