ಉಕ್ರೇನ್ ಸಮರ: ಬೆಂಗಳೂರಿಗೆ ಬಂದ 12 ಮಂದಿ ಕನ್ನಡಿಗರ ಸ್ವಾಗತಿಸಿದ ಸಚಿವ ಆರ್.ಅಶೋಕ್
ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ತೆರಳಿದ್ದ ಕರ್ನಾಟಕ ವಿದ್ಯಾರ್ಥಿಗಳ ಪೈಕಿ 12 ಜನರು ಭಾನುವಾರ (ಫೆ.27) ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯಕ್ಕೆ ಆಗಮಿಸಿದ 12 ಮಂದಿಯನ್ನು ಸಚಿವ ಆರ್. ಅಶೋಕ್ ಅವರು ಸ್ವಾಗತಿಸಿದರು.
Published: 27th February 2022 11:10 AM | Last Updated: 27th February 2022 11:10 AM | A+A A-

ಉಕ್ರೇನ್ ನಿಂದ ಆಗಮಿಸಿದ ಮೊದಲ ತಂಡದ 12 ವಿದ್ಯಾರ್ಥಿಗಳನ್ನು ಬೆಂಗಳೂರು ಏರ್ ಪೋರ್ಟ್ ನಲ್ಲಿ ಸ್ವಾಗತಿಸಿದ ಸಚಿವ ಆರ್.ಅಶೋಕ್
ಬೆಂಗಳೂರು: ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ತೆರಳಿದ್ದ ಕರ್ನಾಟಕ ವಿದ್ಯಾರ್ಥಿಗಳ ಪೈಕಿ 12 ಜನರು ಭಾನುವಾರ (ಫೆ.27) ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯಕ್ಕೆ ಆಗಮಿಸಿದ 12 ಮಂದಿಯನ್ನು ಸಚಿವ ಆರ್. ಅಶೋಕ್ ಅವರು ಸ್ವಾಗತಿಸಿದರು.
ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಸಚಿವರು, "ದೆಹಲಿಯಿಂದ ಇನ್ನು 18 ಜನರು ಆಗಮಿಸಲಿದ್ದಾರೆ. ರಾಜ್ಯ ಕಂದಾಯ ಇಲಾಖೆಯಿಂದ ಕರ್ನಾಟಕ ಭವನದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ" ಎಂದು ಹೇಳಿದರು.
ಉಕ್ರೇನ್ ನಿಂದ ಆಗಮಿಸಿದ ಮೊದಲ ತಂಡದ 12 ವಿದ್ಯಾರ್ಥಿಗಳನ್ನು ಬೆಂಗಳೂರು ಏರ್ ಪೋರ್ಟ್ ನಲ್ಲಿ ಸ್ವಾಗತಿಸಲಾಯಿತು.#RAshoka #RevenueMinister pic.twitter.com/VFpq7RZ8r5
— R. Ashoka (ಆರ್. ಅಶೋಕ) (@RAshokaBJP) February 27, 2022
"ಉಕ್ರೇನ್ನಿಂದ ಆಗಮಿಸಿದವರು ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬೆಂಗಳೂರಿಗೆ ಬರಲು ಅವರಿಗೆ ಟಿಕೆಟ್ ಬುಕ್ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಯೂ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.
ನಗರಕ್ಕೆ ಬಂದಿಳಿದ ಶ್ರೇಯಾ ಎಂಬುವವರು ಮಾತನಾಡಿ, ತಾಯ್ನಾಡಿಗೆ ಬಂದಿಳಿದಿದ್ದು ಬಹಳ ಸಂತಸ ತಂದಿದೆ. ಆದರೆ, ನನ್ನ ಸ್ನೇಹಿತರಿನ್ನೂ ಉಕ್ರೇನ್ ನಲ್ಲಿಯೇ ಸಿಲುಕಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರವಾಗಿ ಹದಗೆಡುತ್ತಿದೆ ಎಂದು ಹೇಳಿದ್ದಾರೆ.
ವಿಜಯಲಕ್ಷ್ಮೀ ಎಂಬುವವರು ಮಾತನಾಡಿ, ಇಲ್ಲಿಗೆ ಬಂದಿಳಿದಿದ್ದು ಬಹಳ ಸಂತೋಷವಾಗುತ್ತಿದೆ. ರಾಯಭಾರಿ ಕಚೇರಿ ತನ್ನಿಂದ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತ ಸರ್ಕಾರ ಹಾಗೂ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ.