ರಾಜ್ಯ ಬಜೆಟ್ ಪೂರ್ವ ಸಮಾಲೋಚನೆ: ಇನ್ಪುಟ್ ತೆರಿಗೆ, ಜಿಎಸ್ಟಿ ಕಡಿಮೆ ಮಾಡುವಂತೆ ಸಿಎಂ ಬೊಮ್ಮಾಯಿ ಬಳಿ ಮನವಿ
ಮಾರ್ಚ್ 4 ರಂದು ಬಜೆಟ್ ಮಂಡನೆಗೂ ಮುನ್ನ ವಿವಿಧ ಕೈಗಾರಿಕಾ ಸಂಘಗಳ ಸದಸ್ಯರು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಇನ್ಪುಟ್ ತೆರಿಗೆ, ಜಿಎಸ್ಟಿ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡರು.
Published: 27th February 2022 01:18 PM | Last Updated: 03rd March 2022 01:35 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಮಾರ್ಚ್ 4 ರಂದು ಬಜೆಟ್ ಮಂಡನೆಗೂ ಮುನ್ನ ವಿವಿಧ ಕೈಗಾರಿಕಾ ಸಂಘಗಳ ಸದಸ್ಯರು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಇನ್ಪುಟ್ ತೆರಿಗೆ, ಜಿಎಸ್ಟಿ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡರು.
ರಾಜ್ಯದ ಎಂಎಸ್ಎಂಇ ಗಳು , ನವೋದ್ಯಮಗಳಿಗೆ ಕೆಎಸ್ಎಫ್ಸಿ ವತಿಯಿಂದ ಶೇಕಡಾ 4 ರ ದರದಲ್ಲಿ ಮೃದು ಸಾಲ,ವಿದ್ಯುತ್ ತೆರಿಗೆಯನ್ನು ಶೇ.9 ರಿಂದ ಶೇ.4ಕ್ಕೆ ಮರು ಪರಿಷ್ಕರಿಸುವುದು, ಸುಮಾರು 1 ಸಾವಿರ ಕೋಟಿ ಅನುದಾನ ನೀಡಬೇಕೆಂದು ಕಾಸಿಯಾ ಆಡಳಿತಾಧಿಕಾರಿ ಪಿ.ಶ್ರೀಧರ್ ಮನವಿ ಮಾಡಿದರು.
ದಾಬಸ್ಪೇಟೆಯಲ್ಲಿ ಯೋಜಿಸಿರುವ ಕಾಸಿಯಾ ಶ್ರೇಷ್ಠತಾ ಮತ್ತು ಅನ್ವೇಷಣಾ ಕೇಂದ್ರದ (ಕೆಸಿಓಇಐ) ಪ್ರಮುಖ ಮೂಲ ಸೌಕರ್ಯಗಳನ್ನು ಪೂರ್ಣಗೊಳಿಸಲು 5 ಕೋಟಿ ರೂ.ಗಳ ಹೆಚ್ಚುವರಿ ಅನುದಾನ, ಕೆಎಸ್ಎಸ್ಐಡಿಸಿ ಕೈಗಾರಿಕಾ ವಸಾಹತುಗಳ ಜೊತೆಗೆ ಖಾಸಗಿ ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರತಿ ಜಿಲ್ಲಾಗೆ 50 ಕೋಟಿ ರೂ. ಮೀಸಲಿಡುವುದು, ಕರ ಸಮಾಧಾನ ಯೋಜನೆಯನ್ನು ಜೂನ್ 2023ರ ವರೆಗೆ ವಿಸ್ತರಿಸುವುದು ಸೇರಿದಂತೆ ಹಲವು ಬೇಡಿಕೆ ಮುಂದಿಡಲಾಗಿದೆ.
ರಾಜ್ಯದ ಆರ್ಥಿಕ, ಕೈಗಾರಿಕಾಭಿವೃದ್ಧಿ, ಉದ್ಯೋಗ ಒದಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಪೀಣ್ಯ ಕೈಗಾರಿಕಾ ವಲಯದ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಒದಗಿಸುವಂತೆ ಪೀಣ್ಯ ಕೈಗಾರಿಕಾ ಸಂಘ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಮುರಳಿ ಕೃಷ್ಣ, ಗೌರವ ಕಾರ್ಯದರ್ಶಿ ಆರ್.ಶಿವಕುಮಾರ್ ನೇತೃತ್ವದ ತಂಡ ಸಣ್ಣ ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿತು.