ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ 'ಜಲಶಕ್ತಿ' ಯೋಜನೆಗೆ ಚಾಲನೆ: ಮುಖ್ಯಮಂತ್ರಿ ಬೊಮ್ಮಾಯಿ
ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ 'ಜಲಶಕ್ತಿ ಯೋಜನೆಯನ್ನು ತಮ್ಮ ಸರ್ಕಾರ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
Published: 28th February 2022 07:27 PM | Last Updated: 28th February 2022 07:28 PM | A+A A-

ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು
ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ 'ಜಲಶಕ್ತಿ ಯೋಜನೆಯನ್ನು ತಮ್ಮ ಸರ್ಕಾರ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಗಳಿಗೆ ಸಮೀಪವಿರುವ ಕೆರೆಗಳು ಮತ್ತು ನದಿಗಳಂತಹ ಎಲ್ಲಾ ನೀರಿನ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನೀರಿನ ಸಂಪನ್ಮೂಲಗಳನ್ನು ಮಹಾರಾಷ್ಟ್ರ ಪರಿಣಾಮಕಾರಿಯಾಗಿ ಬಳಸಿಕೊಂಡಿರುವಂತೆ ಜಲಶಕ್ತಿ ಯೋಜನೆಯಡಿ ನೀರಿನ ಸದ್ಬಳಕೆ, ಅಣೆಕಟ್ಟುಗಳ ನಿರ್ಮಾಣ, ಜಲಮೂಲಗಳ ಪರಿಣಾಮಕಾರಿ ಬಳಕೆ ಮತ್ತಿತರ ಯೋಜನೆಯನ್ನು ರಾಜ್ಯದಲ್ಲಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಬೆಳಗಾವಿಯಲ್ಲಿ ಸೋಮವಾರ ಸುಮಾರು 3,972 ಕೋಟಿ ರೂ. ಮೊತ್ತದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ, ಮಹಾರಾಷ್ಟ್ರದ ಗಡಿ ಭಾಗ ನಿಪ್ಪಾಣಿಯಿಂದ ಕಿತ್ತೂರುವರೆಗಿನ ಹೆದ್ದಾರಿಯಲ್ಲಿ ಮೊದಲಿಗೆ ಜಲಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. ತದನಂತರ ಇಡೀ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸಲಾಗುವುದು, ಜಲಶಕ್ತಿ ಯೋಜನೆ ಅನುಷ್ಟಾನಕ್ಕೆ ಶೀಘ್ರದಲ್ಲಿಯೇ ಸರ್ಕಾರ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.
Privilege to share dais with @nitingadkari Ji & dignitaries for foundation stone laying & dedication to nation of 26 National Highway projects, the arteries of growth for North Karnataka that will result in all round development of the region. #GatiShakti#PragatiKaHighway pic.twitter.com/IwmcmVaEEi
— Basavaraj S Bommai (@BSBommai) February 28, 2022
ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಪರ್ಕಿಸುವ ರಸ್ತೆಯಲ್ಲಿ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಸಂಪರ್ಕಿಸುವ ಯೋಜನೆಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆ ಅನುಷ್ಠಾನವಾದರೆ ಶಿರಡಿ, ಪಂದರಪುರ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ವಿಜಯಪುರದಂತಹ ಸ್ಥಳಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದರು.
ಹುಬ್ಬಳ್ಳಿ- ಧಾರವಾಡ, ಬೆಳವಾಗಿ ಮತ್ತು ರಾಯಚೂರು ಸೇರಿದಂತೆ ರಾಜ್ಯದಲ್ಲಿ ಎಲ್ಲ ವರ್ತುಲ ರಸ್ತೆಗಳನ್ನು ಮುಗಿಸಲು ಕೇಂದ್ರ ಸಚಿವರು ನೆರವಾಗಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ಅಲ್ಲದೇ ಹೆದ್ದಾರಿಗಳ ಅಭಿವೃದ್ದಿಗಾಗಿ ಜಿಎಸ್ ಟಿಯಲ್ಲಿ ಕಡಿತ, ಭೂ ಸ್ವಾಧೀನಕ್ಕೆ ಬೆಂಬಲ ಮತ್ತಿತರ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಹೇಳಿದರು.
ದೇಶಾದ್ಯಂತ ರಸ್ತೆ ಅಭಿವೃದ್ಧಿಗೆ ಗಡ್ಕರಿ ಅವರ ಪ್ರಯತ್ನವನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಗಡ್ಕರಿ ಹೆದ್ದಾರಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ರಾಜ್ಯದಲ್ಲಿ ಸುಮಾರು 5000 ಕಿಲೋಮೀಟರ್ ಗೂ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಯಲಾಗಿದೆ ಎಂದು ತಿಳಿಸಿದರು.