ಮೇಕೆದಾಟು ಪಾದಯಾತ್ರೆ 2.0: ಬಿಡದಿಯಿಂದ ನಡಿಗೆ ಮುಂದುವರಿಕೆ; ಜನರ ಬದುಕಿಗಾಗಿ ನಮ್ಮ ಹೋರಾಟ ಎಂದ ಡಿಕೆ ಶಿವಕುಮಾರ್
ಮೇಕೆದಾಟು ಯೋಜನೆಯ ಶೀಘ್ರ ಜಾರಿಗೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು 2ನೇ ಭಾಗದ ಪಾದಯಾತ್ರೆ ಇಂದು ಸೋಮವಾರ ಮುಂದುವರಿದಿದೆ.
Published: 28th February 2022 11:29 AM | Last Updated: 28th February 2022 01:29 PM | A+A A-

ಬಾಣಂದೂರು ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಡಿ ಕೆ ಶಿವಕುಮಾರ್
ರಾಮನಗರ/ಬೆಂಗಳೂರು: ಮೇಕೆದಾಟು ಯೋಜನೆಯ ಶೀಘ್ರ ಜಾರಿಗೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು 2ನೇ ಭಾಗದ ಪಾದಯಾತ್ರೆ ಇಂದು ಸೋಮವಾರ ಮುಂದುವರಿದಿದೆ.
ಕೋವಿಡ್ ಮೂರನೇ ಅಲೆಯ ಉತ್ತುಂಗ ಸಮಯದಲ್ಲಿ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ಮಾಡಬೇಡಿ ಎಂದು ಹೈಕೋರ್ಟ್ ತಡೆಯಾಜ್ಞೆ ತಂದಿದ್ದರಿಂದ ಒಂದು ತಿಂಗಳ ಹಿಂದೆ ಕಾಂಗ್ರೆಸ್ ನ ಪಾದಯಾತ್ರೆ ರಾಮನಗರದಲ್ಲಿ ಸ್ಥಗಿತಗೊಂಡಿತ್ತು.
ರಾಮನಗರದಲ್ಲಿ ನಿಂತಿದ್ದ ಮೇಕೆದಾಟು ಪಾದಯಾತ್ರೆ 2.O ಕ್ಕೆ ನಿನ್ನೆ ಚಾಲನೆ ಸಿಕ್ಕಿದೆ. 2ನೇ ಹಂತದ ಪಾದಯಾತ್ರೆ ಮಾರ್ಚ್ 3 ನೇ ತಾರೀಕು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ ತಲುಪುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ನಿನ್ನೆ ರಾಮನಗರದಿಂದ ಶುರುವಾದ ಪಾದಯಾತ್ರೆ ಸಂಜೆ ಬಿಡದಿ ತಲುಪಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಬಿಡದಿಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಇಂದು ಸಂಜೆ ಕೆಂಗೇರಿ ತಲುಪುತ್ತದೆ.
ಪೂಜೆ ಸಲ್ಲಿಸಿದ ಡಿ ಕೆ ಶಿವಕುಮಾರ್: ಪಾದಯಾತ್ರೆಗೂ ಮುನ್ನ ಡಿ ಕೆ ಶಿವಕುಮಾರ್, ಇಂದು ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರಿನ ಆಂಜನೇಯ ಸ್ವಾಮಿ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಮಾಗಡಿ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಹುಟ್ಟುಹಬ್ಬ ಹಿನ್ನೆಲೆ ಇದೇ ವೇಳೆ ದೇವಸ್ಥಾನದ ಮುಂಭಾಗ ಡಿಕೆಶಿ ಹುಟ್ಟುಹಬ್ಬ ಆಚರಿಸಿದರು.
ಆದಿ ಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು ಬಾನಂದೂರು ಗ್ರಾಮದ ಬಳಿ ಇರೋ ಆದಿ ಚುಂಚನಗಿರಿ ಮಠದಲ್ಲಿ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ. ಎರಡನೇ ದಿನದ ಪಾದಯಾತ್ರೆಗೂ ಮುನ್ನ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಜೊತೆಗೂಡಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಹೋರಾಟಗಾರರಿಗೆ ಯಾರ ಅನುಮತಿ ಬೇಕು. ಸಿಎಂ ಅವರಿಗೆ ತಿಳಿಸಿದ್ದೇವೆ. ಟ್ರಾಫಿಕ್ ಗಮನದಲ್ಲಿ ಇಟ್ಟುಕೊಂಡು ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಕೊವಿಡ್ ನಿಯಮ ಗಮನದಲ್ಲಿ ಇಟ್ಟುಕೊಂಡು ಪಾದಯಾತ್ರೆ ಮಾಡಿ ಎಂದು ಹೇಳಿದ್ದಾರೆ. ಪಾದಯಾತ್ರೆ ಶುರು ಮಾಡುತ್ತೇವೆ ಎಂದೇ ನಿಯಮಗಳನ್ನ ಹಾಕುತ್ತಾರೆ ಎಂದು ಆರೋಪಿಸಿದರು.
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಸಮಯದಲ್ಲಿ ಹರ್ಷ ಸಾವಿನ ಬಳಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಕ್ಕೆ ಈಶ್ವರಪ್ಪ, ಬಿ ವೈ, ರಾಘವೇಂದ್ರ ರನ್ನ ಯಾಕೆ ಬಂಧನ ಮಾಡಿಲ್ಲ. ಎಫ್ ಐ ಆರ್ ಯಾಕೆ ಹಾಕಿಲ್ಲ. ಬಜರಂಗದಳದವರು ಮಾಡಿದ್ದಾರೆ. ಅವರ ಮೇಲೆ ಕೇಸ್ ಹಾಕಿಲ್ಲ. ಇವರಿಗೆ ಒಂದು ನ್ಯಾಯ ನಮಗೆ ಒಂದು ನ್ಯಾಯಾನಾ. ಐದು ದಿನ ಕಷ್ಟ ಆಗಬಹುದು. ಐವತ್ತು ವರ್ಷ ಆರಾಮಾಗಿ ಇರಬಹುದು. ಜನರ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಮೇಕೆದಾಟು ಪಾದಯಾತ್ರೆಯನ್ನು ಸಮರ್ಥಿಸಿಕೊಂಡರು.
2ನೇ ದಿನ - ಐತಿಹಾಸಿಕ ಮೇಕೆದಾಟು ಪಾದಯಾತ್ರೆ 2.O ನೇರಪ್ರಸಾರ #NammaNeeruNammaHakku https://t.co/K06cLOHzpd
— DK Shivakumar (@DKShivakumar) February 28, 2022
ಪಾದಯಾತ್ರೆಗೆ ಬಿಬಿಎಂಪಿ ಅನುಮತಿ ನೀಡದಿದ್ದರೂ ಹೋರಾಟ ಮಾಡುತ್ತೇವೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅನುಮತಿ ಸಿಕ್ಕಿದೆ. ಕೊವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ ಎಂದರು.