ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನಿರಾಕರಣೆ; ಕಾಲೇಜು ನಿಯಮ ಪಾಲನೆಗೆ ಪೊಲೀಸರಿಂದ ಸೂಚನೆ
ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದಕ್ಕೆ ಹಾಗೂ ತರಗತಿಗಳಲ್ಲಿ ಉರ್ದು, ಅರೇಬಿಕ್, ಬ್ಯಾರಿ ಭಾಷೆಗಳನ್ನು ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಉಡುಪಿ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ 6 ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ.
Published: 01st January 2022 06:30 PM | Last Updated: 01st January 2022 06:30 PM | A+A A-

ಹಿಜಾಬ್ (ಸಂಗ್ರಹ ಚಿತ್ರ)
ಉಡುಪಿ: ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದಕ್ಕೆ ಹಾಗೂ ತರಗತಿಗಳಲ್ಲಿ ಉರ್ದು, ಅರೇಬಿಕ್, ಬ್ಯಾರಿ ಭಾಷೆಗಳನ್ನು ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಉಡುಪಿ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ 6 ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ.
ನಾವು ತಾರತಮ್ಯ ಎದುರಿಸುತ್ತಿದ್ದೇವೆ. ಈ ಕುರಿತು ಪೋಷಕರು ಮಾತನಾಡುವುದಕ್ಕೆ ಬಂದರೂ ಅವರೊಂದಿಗೆ ಪ್ರಾಂಶುಪಾಲರಾಗಿರುವ ರುದ್ರ ಗೌಡ ಮಾತನಾಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ಮೂರು ದಿನಗಳ ಕಾಲ ತರಗತಿಗಳಿಂದ ಹೊರಗೆ ಉಳಿದಿದ್ದರು. ತಮಗೆ ಮೂರು ದಿನಗಳಿಂದ ಹಾಜರಾತಿಯನ್ನು ನೀಡಲಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಹಾಜರಾತಿ ಸಮಸ್ಯೆ ಎದುರಾಗಲಿದೆ ಎಂದು ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರವೇಶಿಸಿರುವ ಪೊಲೀಸ್ ಇಲಾಖೆ ವಿದ್ಯಾರ್ಥಿನಿಯರಿಗೆ ಕಾಲೇಜು ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಡುವೆ ಸಾಮಾಜಿಕ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದು, ಕಾಲೇಜು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸುತ್ತಿರುವುದು ಸ್ವೀಕಾರಾರ್ಹವಲ್ಲ, ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗ ತೋರಿಸಬೇಕಾದ ಶಿಕ್ಷಣ ಸಂಸ್ಥೆಗಳು ಈ ರೀತಿಯ ವಿವಾದಗಳಲ್ಲಿ ತೊಡಗಿವೆ ಇದು ಸರಿಯಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದೇ ಇದ್ದಲ್ಲಿ ಈ ಫ್ಯಾಸಿಸ್ಟ್ ಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಉಡುಪಿ ಎಸ್ ಡಿಪಿಐ ನ ಅಧ್ಯಕ್ಷರಾದ ನಜೀರ್ ಅಹ್ಮದ್ ಎಚ್ಚರಿಸಿದ್ದಾರೆ. ಈ ನಡುವೆ ಉಡುಪಿ ಜಿಲ್ಲಾ ಡಿಡಿಪಿಯುಗೆ ದೂರು ನೀಡಲಾಗಿದ್ದು, ಪೋಷಕರೊಂದಿಗೆ ಚರ್ಚಿಸುವುದಾಗಿ ಪ್ರಾಂಶುಪಾಲರು ಡಿಡಿಪಿಯುಗೆ ತಿಳಿಸಿದ್ದಾರೆ.