ರಾಜ್ಯಾದ್ಯಂತ ಆಸ್ತಿ ನೋಂದಣಿ ಮಾರ್ಗಸೂಚಿ ದರ ಕಡಿತ, ಶೇ 10 ರಷ್ಟು ರಿಯಾಯತಿ: ಸಚಿವ ಆರ್ ಅಶೋಕ್
ಕೋವಿಡ್-19 ಹಿನ್ನೆಲೆಯಲ್ಲಿ ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಆಸ್ತಿ ನೋಂದಣಿಗೆ ಕಂದಾಯ ಇಲಾಖೆ ವಿಶೇಷ ರಿಯಾಯತಿ ಪ್ರಕಟಿಸಿದೆ.
Published: 01st January 2022 07:26 PM | Last Updated: 01st January 2022 07:26 PM | A+A A-

ಆರ್ ಅಶೋಕ್
ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಆಸ್ತಿ ನೋಂದಣಿಗೆ ಕಂದಾಯ ಇಲಾಖೆ ವಿಶೇಷ ರಿಯಾಯತಿ ಪ್ರಕಟಿಸಿದೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಹೊಸ ವರ್ಷದ ಮೊದಲ ದಿನವೇ ಸರ್ಕಾರ ಈ ರಿಯಾಯಿತಿಯನ್ನು ಜನರ ಅನುಕೂಲಕ್ಕಾಗಿ ನೀಡುತ್ತಿದೆ. ಇಂದಿನಿಂದಲೇ ಈ ಸೌಲಭ್ಯವನ್ನು ಜನರು ಪಡೆದುಕೊಳ್ಳಬಹುದು. ಇದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಸ್ವಲ್ಪ ಆದಾಯ ಕಡಿಮೆ ಆಗಬಹುದು. ಆದರೆ ಲಕ್ಷಾಂತರ ಜನರಿಗೆ ಇದು ಅನುಕೂಲವಾಗುತ್ತದೆ ಎಂದರು.
ಅಗ್ರಿಮೆಂಟ್, ಜಿಪಿಎ ಮಾಡಿಕೊಂಡಿದ್ದ ರೈತರು ಈಗ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನಗಳು, ಕಟ್ಟಡಗಳು, ಅಪಾರ್ಟ್ಮೆಂಟ್ ಹಾಗೂ ಇತರ ಎಲ್ಲ ರೀತಿಯ ಸ್ಥಿರಾಸ್ತಿಗಳ ನೋಂದಣಿ ಮಾರ್ಗಸೂಚಿ ದರವನ್ನು ಶೇ. 10 ರಷ್ಟು ಕಡಿತಗೊಳಿಸಲಾಗಿದೆ. ಈ ರಿಯಾಯಿತಿ ಜ.1ರಿಂದ ಮಾರ್ಚ್ ಅಂತ್ಯದವರೆಗೆ ಮಾತ್ರ ಲಭ್ಯ ಇರುತ್ತದೆ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ಅಶೋಕ್ ಅವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ,ಕೆ, ಶಿವಕುಮಾರ್ ಅವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರು ವರ್ಷ ಇತ್ತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ರು. ನಯಾ ಪೈಸಾ ನೀರಾವರಿಗೆ ಮೀಸಲಿಡಲಿಲ್ಲ. ಅದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಏನೂ ಮಾಡದಿದ್ದಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಗಿಮಿಕ್ ಪಾದಯಾತ್ರೆ” ಎಂದು ವ್ಯಂಗ್ಯವಾಡಿದ್ದಾರೆ.
ಜನರ ಬಗ್ಗೆ ಅವರಿಗೆ ಕಿಂಚಿತ್ ಕಾಳಜಿ ಇಲ್ಲ. ಮೇಕೇದಾಟು ಬಗ್ಗೆ ಈಗ ಮೈ ಪರಚಿಕೊಳ್ತಿದ್ದಾರೆ. ನನಗೆ ಮಸಾಲೆ ಬೇಕಿಲ್ಲ, ಅವರಿಗೆ ಬೇಕಿರೋದು. ಇವರಿಗೆ ನಿಜವಾಗಿ ಕಾಳಜಿ ಇದ್ರೆ, ಅಧಿಕಾರದಲ್ಲಿ ಇದ್ದಾಗಲೇ ಮಾಡ್ತಿದ್ರು. ಡಿಪಿಆರ್ ಮಾಡಲು ಆರು ವರ್ಷ ಬೇಕಿತ್ತಾ.? ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಮಾಡಿದ್ರು, ಅಲ್ಲಿ ನೀರೇ ಬತ್ತಿ ಹೋಯ್ತು. ಈಗ ಮೇಕೇದಾಟು ಕೂಡ ಅದೇ ಪರಿಸ್ಥಿತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.