ಕೋವಿಡ್ ತಡೆಗೆ ಎಲ್ಲರು ಸಹಕರಿಸಬೇಕು, ಅದು ಬಿಟ್ಟು ಈ ಸಂದರ್ಭದಲ್ಲಿ ಕಾಂಗ್ರೆಸ್ ನವರ ಪಾದಯಾತ್ರೆ ಎಷ್ಟು ಸರಿ?: ಡಾ ಕೆ ಸುಧಾಕರ್ ಪ್ರಶ್ನೆ
ರಾಜ್ಯದಲ್ಲಿ ದಿನೇದಿನೇ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ಸೋಂಕಿತರ ಸಂಖ್ಯೆ ಶೇಕಡಾ 1.6ಕ್ಕೆ ಹಠಾತ್ ಏರಿಕೆಯಾಗಿದೆ. ಶೇಕಡಾ 0.4ರಷ್ಟಿದ್ದಿದ್ದು ಒಂದೇ ದಿನದಲ್ಲಿ ಶೇಕಡಾ 1.6ಕ್ಕೆ ಏರಿಕೆಯಾಗಿದ್ದು ನಿನ್ನೆಯ ಹೊತ್ತಿಗೆ 1200 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ.
Published: 04th January 2022 11:18 AM | Last Updated: 04th January 2022 01:26 PM | A+A A-

ಡಾ ಕೆ ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ಸೋಂಕಿತರ ಸಂಖ್ಯೆ ಶೇಕಡಾ 1.6ಕ್ಕೆ ಹಠಾತ್ ಏರಿಕೆಯಾಗಿದೆ. ಶೇಕಡಾ 0.4ರಷ್ಟಿದ್ದಿದ್ದು ಒಂದೇ ದಿನದಲ್ಲಿ ಶೇಕಡಾ 1.6ಕ್ಕೆ ಏರಿಕೆಯಾಗಿದ್ದು ನಿನ್ನೆಯ ಹೊತ್ತಿಗೆ 1200 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ, ಅದರಲ್ಲಿ ಶೇಕಡಾ 90ರಷ್ಟು ಬೆಂಗಳೂರಿನಲ್ಲಿಯೇ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.
ದೇಶದಲ್ಲಿ ಎಲ್ಲಾ ಮೆಟ್ರೊ ಪಾಲಿಟನ್ ನಗರಗಳಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ತೀವ್ರ ನಿಗಾವಹಿಸುವುದು, ಮೈಕ್ರೋ ಕಂಟೈನ್ ಮೆಂಟ್ ವಲಯವನ್ನು ಮಾಡುವ ಬಗ್ಗೆ ಹಾಗೂ ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಂದು ಸಂಜೆ ಮುಖ್ಯಮಂತ್ರಿಗಳು ಕೋವಿಡ್ ತಾಂತ್ರಿಕ ಸಮಿತಿ ತಜ್ಞರೊಂದಿಗೆ, ಕಾರ್ಯಪಡೆ ಸಮಿತಿ ಸದಸ್ಯರೊಂದಿಗೆ, ಹಿರಿಯ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಮುಂದಿನ ದಿನಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಬೇಕೆಂದು ತೀರ್ಮಾನಿಸಲಿದ್ದೇವೆ. ನಿನ್ನೆ ಒಂದೇ ದಿನ 4 ಲಕ್ಷಕ್ಕೂ ಅಧಿಕ 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಸರ್ಕಾರ ನಿಗದಿಮಾಡಿದ್ದು ಮೊದಲ ದಿನ ಸುಮಾರು 6 ಲಕ್ಷ ಲಸಿಕೆ ವಿತರಣೆ, ಮೊದಲ ದಿನ ಶೇಕಡಾ 60ರಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿ ಕರ್ನಾಟಕವಿದೆ ಎಂದರು.
ಮಕ್ಕಳಿಗೆ 10ರಿಂದ 15 ದಿವಸಗಳಲ್ಲಿ ಇನ್ನು 15 ದಿನಗಳೊಳಗೆ ಲಸಿಕೆಯ ಮೊದಲ ಡೋಸ್ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಎಲ್.ಕೆ ಅಡ್ವಾಣಿ ಮಾಡಿದ ರಥಯಾತ್ರೆ ಗಿಮಿಕ್ ಅಲ್ಲವೇ; ವಿಠ್ಲೇನಹಳ್ಳಿಯಿಂದ ದೇವೇಗೌಡರು ಮಾಡಿದ ಪಾದಯಾತ್ರೆ ಏನು?
ಓಮಿಕ್ರಾನ್ ವೇಗ ಹೆಚ್ಚಳ: ಇಡೀ ಪ್ರಪಂಚದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳವಾಗುತ್ತಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ, ಮಹಾರಾಷ್ಟ್ರದಲ್ಲಿ ಹೆಚ್ಚಿದೆ, ನಿನ್ನೆ ದೆಹಲಿಯಲ್ಲಿ 4 ಸಾವಿರಕ್ಕೂ ಅಧಿಕ ಕೋವಿಡ್ ಕೇಸುಗಳು ವರದಿಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ವಿಶೇಷ ಕಾಳಜಿ ವಹಿಸಿ ಎಲ್ಲಾ ರೀತಿಯ ಕ್ರಮಗಳನ್ನು ಚರ್ಚೆ ಮಾಡಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಮೂರನೇ ಅಲೆ: ಕೆಲ ದಿನಗಳ ಹಿಂದೆ ಕೋವಿಡ್ ಅಷ್ಟೊಂದು ಇರಲಿಲ್ಲ. ಈಗ ಹೊಸ ವರ್ಷದ ನಂತರ ಹಠಾತ್ ಏರಿಕೆಯಾಗಿದೆ ಎಂದರೆ ಕೊರೋನಾ ಮೂರನೇ ಅಲೆ ಆರಂಭವಾಗಿದೆ ಎಂದರ್ಥ. ಶಾಲೆ-ಕಾಲೇಜು ನಡೆಸುವ ಬಗ್ಗೆ ಯಾವೆಲ್ಲಾ ಕಠಿಣ ನಿರ್ಬಂಧ ಹೇರಬೇಕು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ ಎಂದರು.
ಲಾಕ್ ಡೌನ್ ನಂತಹ ಕಠಿಣ ಪದ ಬೇಡ: ಕಳೆದ ಎರಡು ವರ್ಷಗಳಲ್ಲಿ ಜನತೆ ಲಾಕ್ ಡೌನ್ ನಿಂದ ಹೈರಾಣಾಗಿ ಹೋಗಿದ್ದಾರೆ. ಈಗತಾನೇ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಾಗಲೇ ಲಾಕ್ ಡೌನ್ ನಂತಹ ಕಠಿಣ ಪದ ಬಳಸಿ ಜನರಲ್ಲಿ ಮತ್ತಷ್ಟು ಆತಂಕವನ್ನುಂಟುಮಾಡುವುದು ಬೇಡ. ಲಾಕ್ ಡೌನ್ ಮಾಡದೆ ಪರ್ಯಾಯ ಕ್ರಮಗಳಿಂದ ಕೊರೋನಾ ನಿಯಂತ್ರಣ ಹೇಗೆ ಮಾಡಬಹುದು ಎಂಬ ಮಾರ್ಗ ಹುಡುಕುತ್ತೇವೆ. ಜನರಿಗೆ ಸಮಸ್ಯೆ ಕೂಡ ಆಗಬಾರದು ಎಂದರು.
ಬೆಂಗಳೂರು ನಗರದಲ್ಲಿ ತಕ್ಷಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಮುಂದಿನ ದಿನಗಳಲ್ಲಿ ಕಠಿಣ ನಿಯಮ ಜಾರಿ ತರುವ ಸುಳಿವನ್ನು ಸಹ ಆರೋಗ್ಯ ಸಚಿವರು ನೀಡಿದರು.
ಚುನಾವಣೆಗೆ ಹತ್ತಿರವಿರುವಾಗ ಮೇಕೆದಾಟು ಯೋಜನೆ ನೆನಪಾಗಿದೆ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆ ಪಾದಯಾತ್ರೆಯಿಂದ ಸಾಕಷ್ಟು ಜನರು ಸೇರಬಹುದು. ಕೊರೋನಾ ಆತಂಕ ನಡುವೆ ಜನಜಂಗುಳಿ ಸೇರಿ ಪಾದಯಾತ್ರೆ ನಡೆಸಿದರೆ ಇನ್ನಷ್ಟು ಹೆಚ್ಚಾಗುತ್ತದೆಯಲ್ಲವೇ, ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುವುದು ಎಷ್ಟು ಸರಿ, ಅದರಿಂದ ಕೊರೋನಾ ಹೆಚ್ಚಾದರೆ ಕಾಂಗ್ರೆಸ್ ಅದರ ಹೊಣೆ ಹೊರಬೇಕಾಗುತ್ತದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಆಡಳಿತ ಸರ್ಕಾರವನ್ನು ಪ್ರಶ್ನಿಸುವುದು ವಿರೋಧ ಪಕ್ಷದ ಜವಾಬ್ದಾರಿ, ಅಧಿಕಾರ ಆಗಿರುತ್ತದೆ ನಿಜ. ಆದರೆ ಹಿಂದೆ ಕಾಂಗ್ರೆಸ್ ಸರ್ಕಾರವೇ ಇತ್ತು, ಆಗ ನೆನಪಾಗದ ಮೇಕೆದಾಟು ಯೋಜನೆ ಈಗ ಬಿಜೆಪಿ ಸರ್ಕಾರವಿರುವಾಗ ಅವರಿಗೆ ನೆನಪಾಗಿದೆ. ಚುನಾವಣೆ ಹತ್ತಿರ ಬರುವಾಗ ಇದೆಲ್ಲಾ ನೆನಪಾಗುತ್ತದೆಯಷ್ಟೆ, ಈಗ ಕೊರೋನಾ ಇಷ್ಟೊಂದು ವ್ಯಾಪಕವಾಗಿ ಹಬ್ಬುತ್ತಿರುವಾಗ ಪಾದಯಾತ್ರೆ ನಡೆಸಿ ಜನಜಂಗುಳಿ ಸೇರಿಸುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.