
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಹುಬ್ಬಳ್ಳಿಯ ಚೇತನ್ ಪಬ್ಲಿಕ್ ಶಾಲೆಯಲ್ಲಿ ಒಂದೇ ತರಗತಿಯ ಕನಿಷ್ಠ ಒಂಬತ್ತು ವಿದ್ಯಾರ್ಥಿಗಳಿಗೆ ಕೋವಿಡ್-ಪಾಸಿಟಿವ್ ದೃಢಪಟ್ಟಿದೆ.
ಅಕ್ಷಯ್‌ನಗರದಲ್ಲಿರುವ ಈ ಖಾಸಗಿ ಶಾಲೆಗೆ ರಜೆ ಘೋಷಿಸಲಾಗಿದ್ದು, ಪಾಲಕರು ಮಕ್ಕಳ ಬಗ್ಗೆ ಆತಂಕಗೊಂಡಿದ್ದಾರೆ. ಶಾಲೆಯ ಇತರ ಎಲ್ಲ ವಿದ್ಯಾರ್ಥಿಗಳಿಗೂ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ. ಓಮಿಕ್ರಾನ್ ಪರೀಕ್ಷೆಗಾಗಿ ಪಾಸಿಟಿವ್ ಬಂದ ವಿದ್ಯಾರ್ಥಿಗಳ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಓಮಿಕ್ರಾನ್ ಭೀತಿ ನಡುವೆ ರಾಜ್ಯದಲ್ಲಿ ಕೋವಿಡ್ ಸೋಂಕು ಉಲ್ಬಣ: ದೈಹಿಕ ತರಗತಿ ಸ್ಥಗಿತಗೊಳಿಸಿದ ಕೆಲ ಶಾಲೆಗಳು!!
ಇತ್ತೀಚಿಗೆ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 300ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ನಂತರ ಪ್ರಾರಂಭಿಸಲಾದ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಹಾಸ್ಟೆಲ್‌ಗಳಲ್ಲಿ ನಿತ್ಯ ತಪಾಸಣೆಯ ಸಮಯದಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿವೆ.
ಒಂಬತ್ತು ವಿದ್ಯಾರ್ಥಿಗಳು ಲಕ್ಷಣರಹಿತರಾಗಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹುಬ್ಬಳ್ಳಿ ನಗರ ಬ್ಲಾಕ್ ಶಿಕ್ಷಣಾಧಿಕಾರಿ(ಬಿಇಒ) ಶ್ರೀಶೈಲ್ ಕರಿಕಟ್ಟಿ ಅವರು ತಿಳಿಸಿದ್ದಾರೆ.
ಆತಂಕಗೊಂಡಿರುವ ಪೋಷಕರು, ಚೇತನ್ ಪಬ್ಲಿಕ್ ಶಾಲೆಯು ಆನ್‌ಲೈನ್ ತರಗತಿಗಳನ್ನು ನಡೆಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಶಾಲೆಯು ಸೋಮವಾರ ಪೂರ್ವ ನಿಗದಿತ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ಮೂಲಕ ನಡೆಸಿತು.