ಕಾಲೇಜಿನಲ್ಲಿ ಕೇಸರಿ ಶಾಲು ವಿವಾದ: ಮಂಗಳೂರು ವಿವಿ ಕುಲಪತಿ ಅಸಮಾಧಾನ
ಜಿಲ್ಲೆಯ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸ್ಕಾರ್ಫ್ ಹಾಗೂ ಕೇಸರಿ ಶಾಲು ವಿವಾದವನ್ನು ಸಂಬಂಧಪಟ್ಟಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಯಡಪಡಿತ್ತಾಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
Published: 07th January 2022 12:22 PM | Last Updated: 07th January 2022 01:20 PM | A+A A-

ಪ್ರೊ. ಯಡಪಡಿತ್ತಾಯ
ಮಂಗಳೂರು: ಜಿಲ್ಲೆಯ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸ್ಕಾರ್ಫ್ ಹಾಗೂ ಕೇಸರಿ ಶಾಲು ವಿವಾದವನ್ನು ಸಂಬಂಧಪಟ್ಟಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಯಡಪಡಿತ್ತಾಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಇಂತಹ ಭಾವನಾತ್ಮಕ ವಿಚಾರಗಳಿಂದ ಕಾಲೇಜುಗಳಲ್ಲಿ ಕಲಿಕಾ ವಾತಾವರಣ ಕೆಡದಂತೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಸಿಂಡಿಕೇಟ್ ಸದಸ್ಯರು, ನಗರದ ಕೆಲ ಪ್ರತಿಷ್ಠಿತ ಕಾಲೇಜುಗಳ ಪ್ರಾಂಶುಪಾಲರನ್ನು ಒಳಗೊಂಡ ಸಮಿತಿಯ ಸಲಹೆ ಸೂಚನೆಗಳನ್ನು ಆದರಿಸಿ ಕೆಲವೊಂದು ಮಾರ್ಗಸೂಚಿಗಳನ್ನು ರಚಿಸಿ ಅದನ್ನು ಸಿಂಡಿಕೇಟ್ ಸಭೆಯ ಒಪ್ಪಿಗೆ ಪಡೆದು ಎಲ್ಲಾ ಕಾಲೇಜುಗಳಿಗೆ ಕಳುಹಿಸಲಾಗುವುದು ಎಂದರು.
ಕಾಲೇಜು ಆಡಳಿತ ಮಂಡಳಿ ಇಂತಹ ಸಮಸ್ಯೆಗಳು ಎದುರಾದಾಗ ಅದು ಹೆಮ್ಮರವಾಗದಂತೆ ಎಚ್ಚರಿಕೆ ವಹಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎಲ್ಲಾ ಕಡೆ ಜಾರಿಗೊಳಿಸಲು ಮಂಗಳೂರು ವಿಶ್ವವಿದ್ಯಾನಿಲಯ ಬದ್ಧವಾಗಿದೆ ಎಂದು ಅವರು ಹೇಳಿದರು.
ಮಂಗಳವಾರ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು. ಮುಂದಿನ ಎರಡು ದಿನಗಳು ಕೂಡ ಕಾಲೇಜಿಗೆ ಹೀಗೆ ಬರುವುದಾಗಿ ಹೇಳಿದ್ದರು. ಈ ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಂಡರೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದ್ದು, ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂಬ ಕಾರಣದಿಂದ ಕಾಲೇಜು ಆಡಳಿತ ಮಂಡಳಿ ಮೌನಕ್ಕೆ ಶರಣಾಗಿದೆ ಎಂದು ಮೂಲಗಳು ತಿಳಿಸಿವೆ.