ಸಚಿವ ಎಸ್. ಟಿ. ಸೋಮಶೇಖರ್ ಪುತ್ರನಿಗೆ ಬ್ಲಾಕ್ ಮೇಲ್ : ಇಬ್ಬರು ಆರೋಪಿಗಳ ಬಂಧನ
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರ ಪುತ್ರ ನಿಶಾಂತ್ ಗೆ ಅಶ್ಲೀಲ ವಿಡಿಯೋ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published: 09th January 2022 01:42 PM | Last Updated: 09th January 2022 02:16 PM | A+A A-

ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಅವರ ಪುತ್ರ ನಿಶಾಂತ್
ಬೆಂಗಳೂರು: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರ ಪುತ್ರ ನಿಶಾಂತ್ ಗೆ ಅಶ್ಲೀಲ ವಿಡಿಯೋ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿವರ ಪುತ್ರನ ಅಶ್ಲಿಲ ವಿಡಿಯೋ ತಮ್ಮ ಬಳಿಯಿದೆ. 1 ಕೋಟಿ ನೀಡದಿದ್ದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುವುದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಆರೋಪಿ ರಾಹುಲ್ ಭಟ್ ಎಂಬಾತನನ್ನು ಐದು ದಿನಗಳವರೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಹುಲ್ ಭಟ್ ದುಬೈನಿಂದ ವಾಪಸ್ಸಾದ ಬಳಿಕ ಆತನನ್ನು ಬಂಧಿಸಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಮತ್ತೋರ್ವ ಆರೋಪಿಯನ್ನು ಗೋವಾದಲ್ಲಿ ಬಂಧಿಸಿದ್ದಾರೆ.
ಉತ್ತರ ಕರ್ನಾಟಕ ಮೂಲದ ಓರ್ವ ಶಾಸಕನ ಪುತ್ರಿ ಭಾಗಿ: ಈ ಪ್ರಕರಣದಲ್ಲಿ ಉತ್ತರ ಕರ್ನಾಟಕ ಮೂಲದ ಲಂಡನ್ ನಲ್ಲಿ ಇರುವ ಶಾಸಕರ ಪುತ್ರಿಯೊಬ್ಬಳು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಸೈಬರ್ ಕ್ರೈಮ್ ಪೊಲೀಸರ ಜೊತೆಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ: ಕೆಲ ದಿನಗಳ ಹಿಂದೆ ಅಪರಿಚಿತ ನಂಬರ್ ನಿಂದ ವಾಟ್ಸಾಪ್ ನಲ್ಲಿ ಅಶ್ಲಿಲ ವಿಡಿಯೋ ಸಂದೇಶ ಕಳುಹಿಸಲಾಗಿತ್ತು. ಅದರಲ್ಲಿ ತನ್ನ ಫೋಟೋ ಎಡಿಟ್ ಮಾಡಿ, 1 ಕೋಟಿ ಹಣ ಕಳುಹಿಸಬೇಕೆಂದು ಬೆದರಿಕೆ ಹಾಕಲಾಗಿತ್ತು. ಬಳಿಕ ಅದನ್ನು ತನ್ನ ತಂದೆಗೂ ಕಳುಹಿಸಿದ್ದರು ಎಂದು ನಿಶಾಂತ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ್ದರು.
ಯುಕೆ ನಂಬರ್ ನಿಂದ ವಾಟ್ಸಾಪ್ ಕ್ರಿಯೇಟ್ ಮಾಡಿರುವುದು ಸಿಸಿಬಿ ತನಿಖೆ ವೇಳೆ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.