ಸಿಎಂ ಸೇರಿದಂತೆ ಸಂಪುಟದ ನಾಲ್ವರು ಸಚಿವರಿಗೆ ಕೊರೋನಾ: ಜೆ ಸಿ ಮಾಧುಸ್ವಾಮಿಗೆ ಪಾಸಿಟಿವ್, ಇಂದು ಮುಖ್ಯಮಂತ್ರಿ ಮಹತ್ವದ ಸಭೆ
ಕೊರೋನಾ ಮೂರನೇ ಅಲೆಯ ಹರಡುವಿಕೆ ಈ ಹಿಂದಿನ ಎರಡು ಅಲೆಗಳಿಗಿಂತ ತೀವ್ರವಾಗಿದೆ. ಈ ಬಾರಿ ಅನೇಕ ಮಂದಿ ಗಣ್ಯರು, ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.
Published: 11th January 2022 12:32 PM | Last Updated: 11th January 2022 03:13 PM | A+A A-

ಸಿಎಂ ಬಸವರಾಜ ಬೊಮ್ಮಾಯಿ(ಸಂಗ್ರಹ ಚಿತ್ರ)
ಬೆಂಗಳೂರು: ಕೊರೋನಾ ಮೂರನೇ ಅಲೆಯ ಹರಡುವಿಕೆ ಈ ಹಿಂದಿನ ಎರಡು ಅಲೆಗಳಿಗಿಂತ ತೀವ್ರವಾಗಿದೆ. ಈ ಬಾರಿ ಅನೇಕ ಮಂದಿ ಗಣ್ಯರು, ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಇಂದು ಅವರ ಸಂಪುಟದ ಮತ್ತೊಬ್ಬ ಹಿರಿಯ ಪ್ರಮುಖ ಸಚಿವ ಜೆ ಸಿ ಮಾಧುಸ್ವಾಮಿಗೆ ಸಹ ಕೊರೋನಾ ಪಾಸಿಟಿವ್ ಬಂದಿದ್ದು ಅವರು ಮತ್ತು ಅವರ ಪುತ್ರಿಗೆ ಪಾಸಿಟಿವ್ ಕಂಡುಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ.
ಈ ಹಿಂದೆ ರಾಜ್ಯ ಸಚಿವ ಸಂಪುಟದ ಸಚಿವರುಗಳಾದ ಆರ್ ಅಶೋಕ್ ಮತ್ತು ಬಿ ಸಿ ನಾಗೇಶ್ ಅವರಿಗೆ ಕೊರೋನಾ ಪಾಸಿಟಿವ್ ಬಂದು ಗುಣಮುಖರಾಗುತ್ತಿದ್ದಾರೆ.
ಇನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಮುಖ್ಯಮಂತ್ರಿಗಳೊಂದಿಗೆ ನೇರ ಸಂಪರ್ಕದಲ್ಲಿ ಸಚಿವರು, ಅಧಿಕಾರಿಗಳಿಗೆ ಕೊರೋನಾ ಆತಂಕ ಶುರುವಾಗಿದೆ. ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೋನಾ, ಮಣಿಪಾಲ್ ಆಸ್ಪತ್ರೆಯಲ್ಲಿ ತಪಾಸಣೆ, ಚಿಕಿತ್ಸೆ: ಪುತ್ರ, ಸೊಸೆಗೂ ಕೋವಿಡ್ ಪಾಸಿಟಿವ್
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನೇದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಲೇ ಇದೆ. ಫೆಬ್ರವರಿ ಹೊತ್ತಿಗೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆಯಿದ್ದು ಈ ಹೊತ್ತಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆದ್ಯತೆಯಾಗಿ ವಾರ-10 ದಿನಗಳ ಮಟ್ಟಿಗೆ ಲಾಕ್ ಡೌನ್ ಆಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ಆರೋಗ್ಯ ಇಲಾಖೆ ಸಭೆ: ಒಂದೇ ಸಮನೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಆರೋಗ್ಯ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದಿದ್ದು ಇಂದು ಅಪರಾಹ್ನ ಸಭೆ ನಡೆಯಲಿದ್ದು, ಈ ಸಭೆ ವರ್ಚುವಲ್ ಆಗಿರುತ್ತದೆ.
ಸಿಎಂ ಮಹತ್ವದ ಮೀಟಿಂಗ್: ಸದ್ಯ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ವರದಿಯಾಗುತ್ತಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ ಎನ್ನಬಹುದು. ಕೊರೋನಾ ಪಾಸಿಟಿವ್ ಆಗಿರುವ ಸಿಎಂ ಬೊಮ್ಮಾಯಿ ಇಂದು ಅಪರಾಹ್ನ 3 ಗಂಟೆಗೆ ವರ್ಚುವಲ್ ಮೂಲಕ ಮಣಿಪಾಲ್ ಆಸ್ಪತ್ರೆಯಿಂದ ಮಹತ್ವದ ಸಭೆ ಕರೆದಿದ್ದಾರೆ. ಇದರಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ.