ಏಕತೆಗೆ ಜಾತಿ ಅಡ್ಡಿಯಾಗುತ್ತಿದೆ: ಮೋಹನ್ ಭಾಗವತ್
ಹಿಂದೂಗಳಲ್ಲಿ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಹಿಂದೂಗಳಲ್ಲಿ ಸಾಮಾಜಿಕ ಸಮಾನತೆಯ ಅಗತ್ಯವಿದ್ದು, ಐಕ್ಯತೆಗೆ ಜಾತೀಯತೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.
Published: 13th January 2022 09:48 AM | Last Updated: 13th January 2022 11:57 AM | A+A A-

ಮೋಹನ್ ಭಾಗವತ್
ಕಲಬುರಗಿ: ಹಿಂದೂಗಳಲ್ಲಿ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಹಿಂದೂಗಳಲ್ಲಿ ಸಾಮಾಜಿಕ ಸಮಾನತೆಯ ಅಗತ್ಯವಿದ್ದು, ಐಕ್ಯತೆಗೆ ಜಾತೀಯತೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.
ಬುಧವಾರ ಸಂಜೆ ವಿವಿಧ ಕ್ಷೇತ್ರಗಳ ಆಯ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಆರಂಭದಿಂದಲೂ, RSS ಹಿಂದೂ ಧರ್ಮದ ಪ್ರಾಚೀನ ಮೌಲ್ಯಗಳನ್ನು ಎತ್ತಿ ಹಿಡಿದಿದ್ದು, ಇದು ವಿವಿಧತೆಯಲ್ಲಿ ಏಕತೆ, ಮಾನವೀಯತೆ ಮತ್ತು ವ್ಯಕ್ತಿತ್ವದ ಜೀವನವನ್ನು ಹೊಂದಿದೆ. ಸಂಘವು 'ಜನನಿ' ಮತ್ತು 'ಜನ್ಮ ಭೂಮಿ' (ತಾಯಿ ಮತ್ತು ಮಾತೃಭೂಮಿ)ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಮತ್ತು ಎರಡರ ಪವಿತ್ರತೆಯನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಘರ್ ವಾಪಸಿ ನಮ್ಮ ಮೂಲ ಮಂತ್ರ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಘೋಷಣೆ
ಬಳಿಕ ನಡೆದ ಸಂವಾದದಲ್ಲಿ ಪಾಲ್ಗೊಂಡ ಭಾಗವತ್ ಅವರು, ಇತರ ದೇಶಗಳಲ್ಲಿನ ವಿದ್ಯಮಾನಗಳಿಗೆ ಹೋಲಿಸಿದರೆ, ಆಂತರಿಕ ಭದ್ರತೆ ಮತ್ತು ರೋಗಗಳನ್ನು ನಿಯಂತ್ರಿಸುವುದು ಸೇರಿದಂತೆ ಹಲವು ಅಂಶಗಳಲ್ಲಿ ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು.
ನೆರೆಯ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲಿನ ದಾಳಿಯ ಕುರಿತ ಪ್ರಶ್ನೆಗೆ ಉತ್ತರಿಸಿ,ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳ ಅಖಂಡ ಭಾರತದ ಭಾಗವಾಗಿದೆ, ಆದರೆ, ಕೆಲವು ಬೆಳವಣಿಗೆಗಳಿಂದಾಗಿ ಅವುಗಳನ್ನು ಇತರೆ ಜನರು ಆಳುತ್ತಿದ್ದಾರೆ ಎಂದು ತಿಳಿಸಿದರು.
ಪಾಕಿಸ್ತಾನದಲ್ಲಿ ಹಿಂದೂಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದಂತೂ ನಿಜ. ಈ ಸಮಸ್ಯೆಗೆ ಪರಿಹಾರವೆಂದರೆ ನಮ್ಮ ರಾಷ್ಟ್ರದಲ್ಲಿ ಹಿಂದೂಗಳು ಒಗ್ಗಟಿನಿಂದ ಇರುವುದಾಗಿದೆ. ನಾವು ಇಲ್ಲಿ ಒಗ್ಗಟ್ಟಾದರೆ ಪಾಕಿಸ್ತಾನದಲ್ಲಿರುವ ಹಿಂದೂಗಳ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು. ಇದೇ ವೇಳೆ ದೇಶದಲ್ಲಿ ಎಲ್ಲರಿಗೂ ಏಕರೂಪದ ಕಾನೂನು ಇರಬೇಕು ಎಂಬುದನ್ನು ಒಪ್ಪಿಕೊಂಡರು.
ಇದನ್ನೂ ಓದಿ: ಮೋಹನ್ ಭಾಗವತ್, ಮುಲಾಯಂ ಸಿಂಗ್ ಯಾದವ್ ಜೊತೆಗಿರುವ ಫೋಟೊ ವೈರಲ್; ಕಾಂಗ್ರೆಸ್ ಅಣಕ
ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಕಲಬುರಗಿ ಸಂಸದ ಡಾ.ಉಮೇಶ ಜಾಧವ್, ಮತ್ತಿತರರು ಉಪಸ್ಥಿತರಿದ್ದರು.