
ಸಂಗ್ರಹ ಚಿತ್ರ
ಬೆಂಗಳೂರು: ಡಾಬಾ ನೌಕರನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ಇಬ್ಬರು ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆಗೆ ಸಂಚು, ಅಪಹರಣ ಮತ್ತು ಗಲಾಟೆ ಪ್ರಕರಣಗಳಲ್ಲಿ ಬಾಗಿಯಾಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಡಾಬಾ ಮಾಲೀಕ ಹಾಗೂ ಆತನ ಪತ್ನಿ ನಡುವೆ ವೈಮನಸ್ಸು ಏರ್ಪಟ್ಟಿದ್ದು, ಪತಿಗೆ ಬುದ್ಧಿ ಕಲಿಸುವ ಸಲುವಾಗಿ ಮಾಲೀಕನ ಪತ್ನಿಯೇ ಸುಪಾರಿ ಕೊಟ್ಟು ಈ ರೀತಿ ಮಾಡಿಸಿದ್ದಾಳೆಂದು ಹೇಳಲಾಗುತ್ತಿದೆ. ಘಟನೆ ವೇಳೆ ಡಾಬಾ ಮಾಲೀಕ ಸ್ಥಳದಲ್ಲಿರಲಿಲ್ಲ ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿ ಅದರಲ್ಲಿನ ದೃಶ್ಯಾವಳಿ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.
ಇದರಂತೆ ಡಾಬಾದ ಇತರೆ ಸಿಬ್ಬಂದಿಗಳ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ಹೇಳಿಕೆಯನ್ವಯ ಅನಾಮಧೇಯ ವ್ಯಕ್ತಿಗಳ ವಿರುದ್ಧ ಸೆಕ್ಷನ್ 436 (ಮನೆ ಧ್ವಂಸ ಮಾಡುವ ಉದ್ದೇಶದಿಂದ ಬೆಂಕಿ ಅಥವಾ ಸ್ಫೋಟಕ ವಸ್ತುಗಳಿಂದ ಕಿಡಿಗೇಡಿತನ) ಮತ್ತು ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಮನೋಜ್ ಸಾವಿನ ನಂತರ, ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ಸೇರಿಸಿದ್ದರು. ಇದೀಗ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ತನಿಖೆ ವೇಳೆ ಸದ್ಯ ತಲೆಮರೆಸಿಕೊಂಡಿರುವ ಆರೋಪಿಯೊಬ್ಬನೊಂದಿಗೆ ಡಾಬಾ ಮಾಲೀಕನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದು, ಆಕೆಯಿಂದ ದೂರ ಇರುವಂತೆ ಆಕೆಯ ಪತಿ ಆರೋಪಿಗೆ ಎಚ್ಚರಿಕೆ ನೀಡಿದ್ದ ಎಂದು ತಿಳಿದುಬಂದಿದೆ. ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಡಾಬಾವನ್ನು ನಾಶಪಡಿಸಲು ಇಬ್ಬರೂ ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಈ ಹಿಂದೆ ರಾತ್ರಿ ಊಟ ಮಾಡಿದ ಬಳಿಕ ಬಿಲ್ ಪಾವತಿಸಲು ನಿರಾಕರಿಸಿದ ಆರೋಪಿಗಳು ಆಕ್ರೋಶಗೊಂಡು ಢಾಬಾಕ್ಕೆ ಬೆಂಕಿ ಹಚ್ಚಿದ್ದರು ಎಂದು ಹೇಳಲಾಗಿತ್ತು. ಆದರೆ, ತನಿಖೆ ವೇಳೆ ಡಾಬಾ ಮಾಲೀಕ ಹಾಗೂ ಆತನ ಪತ್ನಿ ನಡುವಿನ ವೈಮನಸ್ಸಿನಿಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬಂಧಿತರ ಪೈಕಿ ಇಬ್ಬರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆಗೆ ಸಂಚು, ಅಪಹರಣ ಮತ್ತು ಗಲಾಟೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.