ವೀಕೆಂಡ್ ಕರ್ಫ್ಯೂ ನಡುವಲ್ಲೇ ನಗರದಲ್ಲಿ ಸಂಕ್ರಾಂತಿ ಸಂಭ್ರಮ: ಕೆಲವೆಡೆ ನಿನ್ನೆ, ಹಲವೆಡೆ ಇಂದು ಆಚರಣೆ
ಮಹಾಮಾರಿ ಕೊರೋನಾ ಸೋಂಕಿನ ತೀವ್ರ ಏರಿಗೆ ಹಾಗೂ ವಾರಾಂತ್ಯದ ಕರ್ಫ್ಯೂ ನಡುವೆಯೇ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
Published: 15th January 2022 09:06 AM | Last Updated: 15th January 2022 09:16 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕಿನ ತೀವ್ರ ಏರಿಗೆ ಹಾಗೂ ವಾರಾಂತ್ಯದ ಕರ್ಫ್ಯೂ ನಡುವೆಯೇ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಬಹುತೇಕ ಕಡೆ ಶುಕ್ರವಾರವೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸಂಕ್ರಾಂತಿ ಶುಕ್ರವಾರವೋ ಅಥವಾ ಶನಿವಾರವೋ ಎಂಬ ಗೊಂದಲದಲ್ಲಿ ಕೆಲವರು ಶುಕ್ರವಾರವೇ ಹಬ್ಬವನ್ನು ಆಚರಿಸಿದ್ದರೆ, ಇನ್ನೂ ಕೆಲವರು ಇಂದು ಆಚರಿಸುತ್ತಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಸತತ ಎರಡನೇ ವಾರವೂ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೂ ತುರ್ತು ಸಂದರ್ಭ ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿರಲಿದೆ.
ಕೊರೋನಾ ಸೋಂಕು ನಿಯಂತ್ರಣಕ್ಕೆ ತರುವ ಸಲುವಾಗಿ ರಾಜ್ಯ ಸರ್ಕಾರ ತಿಂಗಳಾಂತ್ಯದವರೆಗೂ ನಿತ್ಯ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯದಲ್ಲಿ ದಿನಪೂರ್ತಿ ಕರ್ಫ್ಯೂ ಜಾರಿಗೊಳಿಸಿದೆ. ಈಗಾಗಲೇ ಕಳೆದ 9 ದಿನಗಳಿಂದ ರಾತ್ರಿ ಕರ್ಫ್ಯೂ ಮತ್ತು ಕಳೆದ ವಾರಾಂತ್ಯದಲ್ಲಿ ಕರ್ಫ್ಯೂ ಇತ್ತು. ಕಳೆದ ವಾರ ಮೊದಲ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಒಂದಿಷ್ಟು ವಿನಾಯಿತಿಗಳನ್ನು ನೀಡಿದ್ದರು. ಆದರೆ, ಈ ವಾರ ಕೊರೋನಾ ಸೋಂಕು ಹೊಸ ಪ್ರಕರಣಗಳು 30 ಸಾವಿರ ಅಸುಪಾಸಿಗೆ ಹೆಚ್ಚಳವಾಗಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೀಗಾಗಿ ಮತ್ತಷ್ಟು ಬಿಗಿ ನಿಯಮ ಜಾರಿಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಗತ್ಯೆ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.
ಕಳೆದ ವಾರ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಅನಗತ್ಯವಾಗಿ ಓಡಾಟ ನಡೆಸುವವರ ವಿರುದ್ಧ ಕಾನೂನು ಕ್ರಮ, ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಮತ್ತಷ್ಟು ಬಿಗಿ ಕ್ರಮದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ವಾಹನ ತಪಾಸಣೆ ಆರಂಭಗೊಂಡಿದೆ. ಪಾರ್ಸಲ್ ನಿಯಮ ಪಾಲಿಸದ ಹೋಟೆಲ್, ರೆಸ್ಟೋರೆಂಟ್ ಗಳಿಗೆ ದಂಡ, ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಜಿಲ್ಲಾಡಳಿತಗಳು ನೀಡಿವೆ. ಇನ್ನು ಈ ತಿಂಗಳ ಅಂತ್ಯದವರೆಗೂ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮುಂದುವರೆಯಲಿವೆ.