ಮೇಕೆದಾಟು ಯೋಜನೆ ಸರಿಯಲ್ಲ, ಯೋಜನೆಯಿಂದ ಜೀವ ವೈವಿಧ್ಯತೆಗೆ ಧಕ್ಕೆ: ಪರಿಸರವಾದಿ ಮೇಧಾ ಪಾಟ್ಕರ್
ವಿರೋಧ ಪಕ್ಷಗಳ ಆಗ್ರಹದ ಬೆನ್ನಲ್ಲೇ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದು, ಈ ಭರವಸೆಗೆ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿಗಳು ಯೋಜನೆಯಿಂದ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
Published: 15th January 2022 12:31 PM | Last Updated: 15th January 2022 12:31 PM | A+A A-

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಮೇಧಾ ಪಾಟ್ಕರ್.
ಬೆಂಗಳೂರು: ವಿರೋಧ ಪಕ್ಷಗಳ ಆಗ್ರಹದ ಬೆನ್ನಲ್ಲೇ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದು, ಈ ಭರವಸೆಗೆ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿಗಳು ಯೋಜನೆಯಿಂದ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿರುವ ಪರಿಸರವಾದಿ ಮೇಧಾ ಪಾಟ್ಕರ್ ಅವರು, ಈ ಪ್ರದೇಶದ ಜೀವ ವೈವಿಧ್ಯತೆ ಮತ್ತು ಕಾವೇರಿ ನದಿಯನ್ನು ಕಾಪಾಡಲು ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಕೈಬಿಡಲು ತಡವಾಗಬಾರದು ಎಂದು ಸಲಹೆ ನೀಡಿದರು.
ಮೇಕೆದಾಟು ನಮಗೆ ಬೇಕು ಎಂದಾದರೆ ಅಣೆಕಟ್ಟು ಎನ್ನಬೇಕು. ಅಲ್ಲಿ ಅಣೆಕಟ್ಟು ಕಟ್ಟುವುದರಿಂದ ಸುಮಾರು 1200 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗುತ್ತೆ. ಲಕ್ಷಾಂತರ ಮರಗಳು ಹಾಳುಗೆಡವುವ ಇಂಥ ಯೋಜನೆ ನಮಗೆ ಬೇಕಿಲ್ಲ. ನಾವೆಲ್ಲರೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ವಿರೋಧಿಸಬೇಕು. ಅಣೆಕಟ್ಟು ನಿರ್ಮಿಸುವುದರಿಂದ ಕೆಲ ರಾಜಕಾರಿಣಿಗಳಿಗೆ, ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ಜನರಿಗೆ ಇದರಿಂದ ಯಾವ ಅನುಕೂಲವೂ ಇಲ್ಲ. ಉತ್ತಮ ಪರಿಸರ ಉಳಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಅಣೆಕಟ್ಟೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಚೇತನ್ ಅವರ ಪ್ರಯತ್ನಕ್ಕೆ ಮೇಧಾ ಪಾಟ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಹೋರಾಟ ಮಾಡಿ ಪರಿಸರ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ. ಈ ಹೋರಾಟದಲ್ಲಿ ದಲಿತ, ಬುಡಕಟ್ಟು ಜನರು ಭಾಗವಹಿಸುತ್ತಿರುವುದು ಸಂತೋಷದ ವಿಷಯ. ನಾವು ಆದಿವಾಸಿಗಳನ್ನು ಉಳಿಸಬೇಕಾಗಿದೆ. ನಾವೆಲ್ಲರೂ ಸೇರಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಬೇಕಿದೆ ಎಂದು ತಿಳಿಸಿದರು.
ಯೋಜನೆಗೆ ಇನ್ನೂ ಪರಿಸರ ಅನುಮತಿ ನೀಡಿಲ್ಲ. ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಾಗಿದೆ. ಆದರೆ, ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ನಾನಿನ್ನೂ ನೋಡಿಲ್ಲ ಎಂದರು.
ಜನಪರವಾಗಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವುದೇ ಮಾತುಕತೆ ನಡೆಸದೆ ಯೋಜನೆ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಅಮೆರಿಕಾದಲ್ಲಿ ನದಿಗಳು ನೈಸರ್ಗಿಕವಾಗಿ ಹರಿಯುವಂತೆ ಮಾಡುವ ಸಲುವಾಗಿ 1,000 ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆಂದು ಹೇಳಿದರು.
ನಟ ಚೇತನ್ ಅವರು ಮಾತನಾಡಿ, ಯೋಜನಾ ಪ್ರದೇಶದಲ್ಲಿರುವ ಜನರನ್ನು ಗ್ರಾಮ ತೊರೆಯುವಂತೆ ಬೆದರಿಕೆಯೊಡ್ಡಲಾಗುತ್ತಿದೆ. ಇತ್ತೀಚೆಗಷ್ಟೇ ಗ್ರಾಮಸ್ಥರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದೆ, ಅವರು ಸ್ಥಳಾಂತರಗೊಳ್ಳಲು ಸಿದ್ಧರಿಲ್ಲ ಎಂದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಭೇಟಿ ಮಾಡಿ ಯೋಜನೆ ರದ್ದುಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.