ಕೋವಿಡ್ಕೇರ್ ಸೆಂಟರ್ಗೆ ಸಚಿವ ಗೋಪಾಲಯ್ಯ ಚಾಲನೆ
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್ ಆಗಿರುವ ಕೋವಿಡ್ ಸೋಂಕಿತರಿಗೆ ಮನೆ ಮನೆಗೆ ಔಷಧಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ಕಾರ್ಯಕ್ರಮಕ್ಕೆ ಇದೇ ಭಾನುವಾರ ಚಾಲನೆ ನೀಡಲಾಗುವುದು ಎಂದು ಕ್ಷೇತ್ರದ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
Published: 15th January 2022 07:14 AM | Last Updated: 15th January 2022 07:14 AM | A+A A-

ಸಚಿವ ಗೋಪಾಲಯ್ಯ
ಬೆಂಗಳೂರು: ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್ ಆಗಿರುವ ಕೋವಿಡ್ ಸೋಂಕಿತರಿಗೆ ಮನೆ ಮನೆಗೆ ಔಷಧಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ಕಾರ್ಯಕ್ರಮಕ್ಕೆ ಇದೇ ಭಾನುವಾರ ಚಾಲನೆ ನೀಡಲಾಗುವುದು ಎಂದು ಕ್ಷೇತ್ರದ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ,.43 ರ ನಂದಿನಿ ಲೇ ಔಟ್ನಲ್ಲಿರುವ ಕೆಂಪೇಗೌಡ ಸಮುದಾಯಭವನದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಿಂತಲೂ ಮಿಗಿಲಾದ ವೈದ್ಯಕೀಯ ಸೌಲಭ್ಯಗಳನ್ನು ಉಳ್ಳ ಆಸ್ಪತ್ರೆಯನ್ನಾಗಿ ಕೆಂಪೇಗೌಡ ಸಮುದಾಯ ಭವನವನ್ನು ಪರಿವರ್ತಿಸಲಾಗಿದೆ. ಸಿಎಸ್ಆರ್ ಫಂಡ್ನಲ್ಲಿ ಈಗಾಗಲೇ ಕೋಟಿ ರೂ ಗೂ ಅಧಿಕ ವೆಚ್ಚದಲ್ಲಿ ಇಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ನುರಿತ ತಜ್ಞರು ಬಂದು ಪರಿಶೀಲನೆ ನಡೆಸಿ ಇನ್ನೂ ಅಗತ್ಯವಾಗಿ ಬೇಕಿರುವ ಪರಿಕರಗಳ ಬಗ್ಗೆ ಪಟ್ಟಿ ನೀಡಿದ್ದಾರೆ. ಅದೆಲ್ಲವನ್ನೂ ಒದಗಿಸಲಾಗುವುದು ಎಂದರು.
ಚಿಕ್ಕ ಮನೆಗಳಲ್ಲಿ ಇರುವ ಸೋಂಕಿತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇಲ್ಲಿ ಕೋವಿಡ್ ಕೇರ್ಸೆಂಟರ್ ಆರಂಭಿಸಲಾಗಿದೆ. ಚಿಕ್ಕ ಮನೆಗಳಲ್ಲಿ ಇರುವ ಯಾರಿಗಾದರೂ ಸೋಂಕು ತಗುಲಿದರೆ ಮನೆಯ ಇತರೆ ಸದಸ್ಯರಿಗೂ ಸೋಂಕು ಹಬ್ಬದಿರಲಿ ಎಂಬ ಉದ್ದೇಶದಿಂದ ಸೋಂಕಿತರನ್ನು ಇಲ್ಲಿಗೆ ದಾಖಲಿಸಲಾಗುವುದು. ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಬೇಕಾದವರಿಗೆ ಇನ್ನೂ ಹೆಚ್ಚಿನ ವೈದ್ಯಕೀಯ ವ್ಯವಸ್ಥೆವುಳ್ಳ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಲಾಗುವುದು. ಕ್ಷೇತ್ರದ ಜನರು ಯಾವುದಕ್ಕೂ ಭಯ ಪಡದೇ ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕರ ಕಚೇರಿಯಲ್ಲಿ ಸಹಾಯವಾಣಿಯನ್ನು ಭಾನುವಾರ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗುವುದು ಮತ್ತು ಮನೆ ಮನೆಗೆ ಕರಪತ್ರಗಳನ್ನು ಹಂಚುವ ಕೆಲಸ ಮಾಡಲಾಗುವುದು. ಅಗತ್ಯಇರುವವರಿಗೆ ಔಷಧಿ ಮಾತ್ರೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಗುವುದು.ಕಳೆದ ಬಾರಿ ತಂಡವಾಗಿ ಮಾಡಿದಂತೆ ಒಗ್ಗಟ್ಟಿನ ಕೆಲಸವನ್ನು ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಓಬಿಸಿ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರಬಾಬು, ಮಾಜಿ ಉಪಮೇಯರ್ ಹರೀಶ್, ಬಿಬಿಎಂಪಿ ಪಶ್ಚಿಮ ವಲಯ ವಿಶೇಷ ಆಯುಕ್ತ ಡಾ. ದೀಪಕ್ , ಜಂಟಿ ಆಯುಕ್ತ ಶಿವಸ್ವಾಮಿ, ಮಾಜಿ ಬಿಬಿಎಂಪಿ ಸದಸ್ಯ ರಾಜೇಂದ್ರಕುಮಾರ್, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.