
ಬಂಧನ (ಸಾಂಕೇತಿಕ ಚಿತ್ರ)
ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ ಐವರು ವ್ಯಕ್ತಿಗಳನ್ನು ಮಹಾಲಕ್ಷ್ಮಿ ಲೇಔಟ್ ನ ಪೊಲೀಸರು ಬಂಧಿಸಿದ್ದಾರೆ.
ಈ ಪೈಕಿ ಇಬ್ಬರು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿದವರಾಗಿದ್ದಾರೆ. ಈ ಗ್ಯಾಂಗ್ ನಲ್ಲಿದ್ದವರು ಮನೆಯನ್ನು ದರೋಡೆ ಮಾಡುವುದಷ್ಟೇ ಅಲ್ಲದೇ, ಮನೆಯ ಮಾಲಿಕ ಹಾಗೂ ಆತನ ಪುತ್ರನನ್ನೂ ಅಪಹರಿಸಿದ್ದರು.
ಪೊಲೀಸರ ಸೋಗಿನಲ್ಲಿ ಬಂದಿದ್ದ ದರೋಡೆಕೋರರು ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ 16 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಇದಷ್ಟೇ ಅಲ್ಲದೇ ಎರಡು ಬೈಕ್ ಗಳನ್ನೂ ದರೋಡೆ ಮಾಡಿದ್ದು ಪೊಲೀಸರು ಬಂಧಿತರಿಂದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಬಾಲಕೃಷ್ಣ, (23) ಚೇತನ್ ಕುಮಾರ್ (27) ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳಾಗಿದ್ದು, ಅವರ ಸಹವರ್ತಿಗಳಾದ ಪುನೀತ್ (24) ಪೃಥ್ವಿ (23) ರೋಹನ್ (24) ಬಂಧಿತರ ಆರೋಪಿಗಳಾಗಿದ್ದಾರೆ.
ಮುಖ್ಯ ಆರೋಪಿ ರೋಹನ್ ಫೋಟೋಗ್ರಾಫರ್ ಆಗಿದ್ದು, ಖಾಸಗಿ ಸ್ಟುಡಿಯೋ ಹೊಂದಿದ್ದಾರೆ ಅಷ್ಟೇ ಅಲ್ಲದೇ ಸಂತ್ರಸ್ತೆ, ಸಿವಿಲ್ ಇಂಜಿಯರ್ ಆಗಿರುವ ಸೌಮ್ಯ ನಾಯ್ಕ್ ಅವರಿಗೆ ಸಂಬಂಧಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ.
ರೋಹನ್ ತನ್ನ ಉದ್ಯಮಕ್ಕೆ ಆರ್ಥಿಕ ನೆರವಿನ ಅಗತ್ಯವಿದ್ದಿದ್ದರಿಂದ ಸೌಮ್ಯ ನಾಯ್ಕ್ ಅವರನ್ನು ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದಾನೆ, ಆದರೆ ಇದಕ್ಕೆ ಸೌಮ್ಯ ನಾಯ್ಕ್ ನಿರಾಕರಿಸಿದ್ದಾರೆ. ಇದಾದ ಬಳಿಕ ರೋಹನ್ ತನ್ನ ಸಹಚರರೊಂದಿಗೆ ಸುಬ್ರಹ್ಮಣ್ಯ ನಗರದಲ್ಲಿರುವ ಮನೆಯಲ್ಲಿ ದರೋಡೆಯ ಯೋಜನೆ ರೂಪಿಸಿದ್ದಾರೆ.
ತಿಪಟೂರು ಪೊಲೀಸರೆಂದು ಹೇಳಿ ನಾಯ್ಕ್ ಅವರು ಕಳ್ಳತನ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಮನೆಯನ್ನು ಶೋಧಿಸಬೇಕೆಂದು ಹೇಳಿದ್ದಾರೆ. ಇದೇ ವೇಳೆ ರೋಹನ್ ಹಾಗೂ ಮತ್ತಿತರರು ಮನೆಯ ನೆರೆಹೊರೆಯವರ ಚಲನವಲನಗಳನ್ನು ಗಮನಿಸಲು ಮನೆಯ ಹೊರಭಾಗದಲ್ಲಿ ನಿಂತಿದ್ದರು. ಪ್ರಕರಣದ ಸಂಬಂಧ ಇನ್ನೂ ಹಲವು ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.