ಯುವ-ಪ್ರತಿಭಾವಂತ ಅಥ್ಲೆಟ್ ಗಳಿಗೆ ನೀರಜ್ ಚೋಪ್ರಾ ಕೋಚ್ ಕಾಶಿನಾಥ್ ನಾಯ್ಕ್ ರಿಂದ ತರಬೇತಿ ಕೊಡಿಸಲು ಪ್ರಯತ್ನ, ಮಾಜಿ ಅಥ್ಲೆಟ್, ಕೋಚ್ ಗಳಿಂದ ಅರ್ಜಿ ಆಹ್ವಾನ
ರಾಜ್ಯದ ಯುವ ಪ್ರತಿಭಾವಂತ ಅಥ್ಲೆಟ್ ಗಳಿಗೆ ಈ ಬಾರಿಯ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra) ಅವರ ಕರ್ನಾಟಕ ಮೂಲದ ಕೋಚ್ ಕಾಶಿನಾಥ್ ನಾಯ್ಕ ಅವರಿಂದ ತರಬೇತಿ ಕೊಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
Published: 16th January 2022 09:58 AM | Last Updated: 16th January 2022 09:58 AM | A+A A-

ನೀರಜ್ ಚೋಪ್ರಾ ಮಾಜಿ ಕೋಚ್ ಕಾಶಿನಾಥ್ ನಾಯ್ಕ್
ಬೆಂಗಳೂರು: ರಾಜ್ಯದ ಯುವ ಪ್ರತಿಭಾವಂತ ಅಥ್ಲೆಟ್ ಗಳಿಗೆ ಈ ಬಾರಿಯ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra) ಅವರ ಕರ್ನಾಟಕ ಮೂಲದ ಕೋಚ್ ಕಾಶಿನಾಥ್ ನಾಯ್ಕ ಅವರಿಂದ ತರಬೇತಿ ಕೊಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಕಾಶಿನಾಥ್ ಅವರು ತರಬೇತಿ ನೀಡಲು ಬರುತ್ತಾರೆ ಎಂದು ನಾವು ಭಾವಿಸಿದ್ದೇವೆ. ನಿಗದಿತ ಕೋಚ್ ಆಗಿ ಅಲ್ಲದಿದ್ದರೂ ಸಲಹಾ ತಂಡದ ಭಾಗವಾಗಿ ಅವರು ನಮ್ಮ ಅಥ್ಲೆಟ್ ಗಳಿಗೆ ತರಬೇತಿ ನೀಡಲು ಸಿಗಬಹುದು ಎಂದು ಭಾವಿಸಿದ್ದೇವೆ. ಕರ್ನಾಟಕದಲ್ಲಿ ಕ್ರೀಡಾ ವಸತಿ ಹಾಸ್ಟೆಲ್ ಗಳು, ಪ್ರತಿಭಾವಂತರು, ಸಾಧನೆ, ಸಲಕರಣೆಗಳು ಹೀಗೆ ಕ್ರೀಡಾಚಟುವಟಿಕೆಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳಿವೆ. ಆದರೆ ಸೂಕ್ತ ಪ್ರತಿಭಾವಂತ ಕೋಚ್ ನ ಕೊರತೆಯಿದ್ದು ಅದರ ಅಭಾವವನ್ನು ಭರ್ತಿ ಮಾಡಲು ನೋಡುತ್ತಿದ್ದೇವೆ ಎಂದು ಕ್ರೀಡಾ ಮತ್ತು ಯುವ ಇಲಾಖೆ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.
ಹರ್ಯಾಣ ಸರ್ಕಾರದ ಮಾದರಿಯಲ್ಲಿ ಹಲವು ಸರ್ಕಾರಿ ಮತ್ತು ಸಾರ್ವಜನಿಕ ವಲಯ ಕಂಪೆನಿಗಳ ಮೂಲಕ ನಮ್ಮ ರಾಜ್ಯದ ಯುವ ಅಥ್ಲೆಟ್ ಗಳಿಗೆ ತರಬೇತಿ ನೀಡಲು ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ ಒಲಿಂಪಿಕ್, ಪಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ ಮಾಜಿ ಅಥ್ಲೆಟ್ ಗಳು ಮತ್ತು ಕೋಚ್ ಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಈ ಮೂಲಕ ರಾಜ್ಯದ ಪ್ರತಿಭಾವಂತ ಯುವ ಅಥ್ಲೆಟ್ ಗಳಿಗೆ ಉತ್ತಮ ಕೋಚಿಂಗ್ ಕೊಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು. ಅರ್ಜಿ ಸಲ್ಲಿಸಲು ಜನವರಿ 30 ಕಡೆಯ ದಿನವಾಗಿದ್ದು, ಆಯ್ಕೆಯಾದ ಕೋಚ್ ಗಳಿಗೆ ಸರ್ಕಾರ ಸಂಭಾವನೆ ನೀಡಲಿದೆ.
ಜಿಲ್ಲೆಗೆ ಒಂದೊಂದು ಕ್ರೀಡೆ ಗುರಿ: ಸಚಿವರು
ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹರಿಯಾಣದ ಮಾದರಿಯನ್ನು ಕರ್ನಾಟಕ ಅಧ್ಯಯನ ಮಾಡಿದೆ. ಕಳೆದ ವರ್ಷ, ಭಾರತವು ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ನಲ್ಲಿ 19 ಪದಕಗಳನ್ನು ಗೆದ್ದುಕೊಂಡಿತು, ಅದರಲ್ಲಿ ಒಂಬತ್ತು ಹರಿಯಾಣದಿಂದ ಬಂದಿದ್ದು, ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರಿಗೆ ಚಿನ್ನದ ಪದಕ ಗಳಿಸಿದೆ.
ಜಿಲ್ಲೆಗೆ ಒಬ್ಬ ಕೋಚ್ ಬೇಕು ಎಂದು ಸಚಿವರು ಹೇಳುತ್ತಾರೆ. ನಾವು ಪ್ರತಿ ಜಿಲ್ಲೆಗೆ ಒಂದು ಕ್ರೀಡೆಯನ್ನು ಗುರಿಯಾಗಿಸಿಕೊಂಡಿದ್ದೇವೆ. ನಿರ್ದಿಷ್ಟ ಕ್ರೀಡೆಯಲ್ಲಿ ಆಸಕ್ತಿ ಇರುವವರು ಆ ಜಿಲ್ಲೆಗೆ ಹೋಗಿ ನಮ್ಮ ಕ್ರೀಡಾ ಹಾಸ್ಟೆಲ್ಗೆ ಸೇರಿ ತರಬೇತಿ ಪಡೆಯಬಹುದು, ಎಂದು ಹೇಳಿದರು.
ಎಲ್ಲಾ ಇಲಾಖೆಗಳಲ್ಲಿ ಕ್ರೀಡಾ ಪಟುಗಳಿಗೆ ಉದ್ಯೋಗ ಮೀಸಲಾತಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ನಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿಯನ್ನು ಘೋಷಿಸುವ ನಿರೀಕ್ಷೆಯಿದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಶೇಕಡಾ 2ರಷ್ಟು ಮೀಸಲಾತಿ ಇದೆ. ಸಿಎಂ ಬೊಮ್ಮಾಯಿ ಅವರು ಕ್ರೀಡಾ ಇಲಾಖೆಯಲ್ಲಿ ಕ್ರೀಡಾ ವ್ಯಕ್ತಿಗಳಿಗೆ ಶೇಕಡಾ 50 ರಷ್ಟು ಉದ್ಯೋಗಗಳನ್ನು ಮೀಸಲಿಡುವ ನಿರೀಕ್ಷೆಯಿದೆ.