ಕಮಿಷನ್ ಆರೋಪ: ದಾಖಲೆ ಬಿಡುಗಡೆ ಮಾಡಿದರೆ ಸರ್ಕಾರ ಪತನ- ರಾಜ್ಯ ಗುತ್ತಿಗೆದಾರರ ಸಂಘ
ಸಾರ್ವಜನಿಕ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆದಿರುವ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿದರೆ ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರದ ಮರಣಶಾಸನವನ್ನು ಸಾಬೀತುಪಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಶನಿವಾರ ಎಚ್ಚರಿಸಿದೆ.
Published: 16th January 2022 07:48 AM | Last Updated: 16th January 2022 07:48 AM | A+A A-

ಸಂಗ್ರಹ ಚಿತ್ರ
ತುಮಕೂರು: ಸಾರ್ವಜನಿಕ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆದಿರುವ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿದರೆ ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರದ ಮರಣಶಾಸನವನ್ನು ಸಾಬೀತುಪಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಶನಿವಾರ ಎಚ್ಚರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಅವರು, ಈ ದಾಖಲೆಗಳಿಂದ ‘ಪಿಡಬ್ಲ್ಯುಡಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ನಾಲ್ವರು ಮುಖ್ಯ ಎಂಜಿನಿಯರ್ಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಮತ್ತು ಇದರಲ್ಲಿ ಭಾಗಿಯಾಗಿರುವ 25 ಕ್ಕೂ ಹೆಚ್ಚು ಶಾಸಕರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್ -19 ಪರಿಸ್ಥಿತಿಯಿಂದಾಗಿ ಬೆಂಗಳೂರಿನಲ್ಲಿ ಯೋಜಿಸಿದ್ದ ಸಾರ್ವಜನಿಕ ರ್ಯಾಲಿಯನ್ನು ಮುಂದೂಡಬೇಕಾಗಿ ಬಂತು. ಸಂಘವು ಮುಂದಿನ ವಾರ ರಾಜ್ಯದ ಗುತ್ತಿಗೆದಾರರು ಮುಖ್ಯಮಂತ್ರಿಗೆ ಪತ್ರ ಚಳವಳಿ ಹಮ್ಮಿಕೊಳ್ಳಲಿದ್ದಾರೆಂದು ತಿಳಿಸಿದರು,
ಇದೇ ವೇಳೆ ದಾಖಲೆಗಳನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಪ್ರಶ್ನೆಗೆ ಉತ್ತರಿಸಿದ ಕೆಂಪಣ್ಣ ಅವರು, ರಾಜ್ಯದಲ್ಲಿ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಮಾರ್ಚ್ 10ರ ನಂತರ ಸಮಯಾವಕಾಶ ದೊರೆತರೆ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಯವರ ಭೇಟಿಗಾಗಿ ಹಲವು ಸಲ ಮನವಿ ಸಲ್ಲಿಸಿದರೂ ಅವರು ಅನುಮತಿ ನೀಡಿಲ್ಲ. ನಮ್ಮ ಎಲ್ಲ ಸಮಸ್ಯೆಗಳ ಕಡೆ ಗಮನಹರಿಸಿ ಮಾತುಕತೆಗೆ ಕರೆಯಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ಸರಕಾರದಿಂದ ಬರಬೇಕಿರುವ 26 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದು ಮತ್ತು ಗುತ್ತಿಗೆಯ ಪ್ಯಾಕೇಜ್ ವ್ಯವಸ್ಥೆಯನ್ನು ರದ್ದುಗೊಳಿಸುವುದು ನಮ್ಮ ಬೇಡಿಕೆಯಾಗಿದೆ. ಕರ್ನಾಟಕದಲ್ಲಿ ಸುಮಾರು 17,000 ಗುತ್ತಿಗೆದಾರರಿದ್ದಾರೆ, ಆದರೆ ಹೊರಗಿನ 296 ಗುತ್ತಿಗೆದಾರರು ಪ್ಯಾಕೇಜ್ ಪದ್ಧತಿಯಡಿ ಶೇಕಡಾ 90 ರಷ್ಟು ಕೆಲಸವನ್ನು ಪಡೆಯುತ್ತಿದ್ದಾರೆ, ಇದು ನಮ್ಮ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.