ಕೋವಿಡ್ ನಿಯಮ ಗಾಳಿಗೆ ತೂರಿ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕ ಎಸ್.ವಿ.ರಾಮಚಂದ್ರ!
ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಭಾನುವಾರ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ, ಜಗಳೂರಿನ ಬಿಜೆಪಿ ಶಾಸಕ ಎಸ್‌ವಿ ರಾಮಚಂದ್ರ ಅವರು ನಿಯಮಗಳ ಉಲ್ಲಂಘಿಸಿ ಇಲ್ಲಿನ ತಮ್ಮ ನಿವಾಸದ ಎದುರು ಹುಟ್ಟುಹಬ್ಬ ಆಚರಿಸಿಕೊಂಡರು.
Published: 17th January 2022 08:20 AM | Last Updated: 17th January 2022 01:33 PM | A+A A-

ಶಾಸಕ ಎಸ್.ವಿ.ರಾಮಚಂದ್ರ
ದಾವಣಗೆರೆ: ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಭಾನುವಾರ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ, ಜಗಳೂರಿನ ಬಿಜೆಪಿ ಶಾಸಕ ಎಸ್‌ವಿ ರಾಮಚಂದ್ರ ಅವರು ನಿಯಮಗಳ ಉಲ್ಲಂಘಿಸಿ ಇಲ್ಲಿನ ತಮ್ಮ ನಿವಾಸದ ಎದುರು ಹುಟ್ಟುಹಬ್ಬ ಆಚರಿಸಿಕೊಂಡರು.
ದಾವಣಗೆರೆ ಕೆ.ಬಿ. ಬಡಾವಣೆಯಲ್ಲಿರುವ ಶಾಸಕರ ಮನೆಯ ಮುಂದೆ ಶಾಮಿಯಾನ, ವೇದಿಕೆ, ಕುರ್ಚಿಗಳನ್ನು ಹಾಕಲಾಗಿತ್ತು. ಅಭಿಮಾನಿಗಳು, ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು, ಪೊಲೀಸರು ಭಾಗವಹಿಸಿ ಶಾಸಕರಿಗೆ ಶುಭಕೋರಿದರು. ಕೋವಿಡ್ ನಿಯಮ ಪಾಲನೆ ಮಾಡದೆಯೇ ಜನುಮದಿನದ ಆಚರಣೆ ನಡೆಯಿತು.
ಸಂಭ್ರಮಾಚರಣೆಗೆ ಬಂದ ಜನರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ವೇಳೆ ಶಾಸಕ ರಾಮಚಂದ್ರಪ್ಪ ಅವರು ಕೇಕ್ ಕಟ್ ಮಾಡಿ, ಆತ್ಮೀಯರೊಂದಿಗೆ ಫೋಟೋಗಳನ್ನು ತೆಗೆಸಿಕೊಂಡರು. ಅಲ್ಲದೆ, ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
600 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ ಹಲವು ದಿನಗಳಿಂದ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಸೋಂಕು ಹರಡುವಿಕೆಯನ್ನು ತಡೆಯಲು ಅಧಿಕಾರಿಗಳು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಾರಾಂತ್ಯದ ಕರ್ಫ್ಯೂ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿದ್ದಾರೆ.
ಈ ನಡುವಲ್ಲೇ ನಿಯಮಗಳನ್ನು ಗಾಳಿಗೆ ತೂರಿ ಶಾಸಕರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ, ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ತಮ್ಮ ಕ್ಷೇತ್ರದಲ್ಲಿ ಸಾಮಾಜಿಕ ಅಂತರದ ನಿಯಮಾವಳಿಗಳನ್ನು ಉಲ್ಲಂಘಿಸಿ ಹೊನ್ನಾಳಿ ತಾಲೂಕಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.