
ಸಾಂದರ್ಭಿಕ ಚಿತ್ರ
ಮೈಸೂರು: ತಮ್ಮ ಕೇರಿಗೆ ಬಂದರು ಎಂಬ ಒಂದೇ ಕಾರಣಕ್ಕಾಗಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಜಯಪುರ ಹೋಬಳಿಯ ಅರಸನಕೆರೆಯಲ್ಲಿ ನಡೆದಿದೆ.
ಅರಸನಕೆರೆ ಗ್ರಾಮದ ಸೌಭಾಗ್ಯ, ದಿಲೀಪ, ಚಂದನ, ಮಧುಕರ, ಪ್ರಸನ್ನ ಎಂಬವವರ ಮನೆಗೆ ನುಗ್ಗಿದ 6 ಮಂದಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ, ಈ ಸಂಬಂಧ ಜಯಪುರ ಠಾಣೆಯ ಪೊಲೀಸರು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಂಡು, 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರಸನಕೆರೆ ಗ್ರಾಮದ ಸೌಭಾಗ್ಯ, ದಿಲೀಪ್, ಚಂದನ, ಮಧುಕರ, ಪ್ರಸನ್ನ ಎಂಬವರೇ ಹಲ್ಲೆಗೊಳಗಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಹಲ್ಲೆ ನಡೆಸಿದ ಅದೇ ಗ್ರಾಮದ ಮೂರ್ತಿ, ಸಚ್ಚಿನ್, ನವೀನ್, ಮಹದೇವಸ್ವಾಮಿ, ಚಂದನ್ ಮತ್ತು ಸಂತೋಷ್ ಎಂಬವವರನ್ನು ಪೊಲೀಸರು ಬಂಧಿಸಿದ್ದಾರೆ.
ಅಂತೆಯೇ ಬಂಧಿತರ ಪೈಕಿ ಓರ್ವನಾಗಿರುವ ಮಹಾದೇವಸ್ವಾಮಿ ಕೂಡ 5 ಮಂದಿ ದಲಿತರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ದಲಿತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸರ್ಕಾರ ಕ್ರಮ: ಸಚಿವ ಶ್ರೀನಿವಾಸ ಪೂಜಾರಿ
ದಿಲೀಪ್, ಪ್ರಸನ್ನ ಮತ್ತು ಮಧುಕರ ಎಂಬುವರು ಪಾನಿಪುರಿ ತಿನ್ನಲೆಂದು ಗುರುವಾರ ರಾತ್ರಿ 7.30ಕ್ಕೆ ಕೇರಿಗೆ ತೆರಳಿದ್ದರು. ಅದನ್ನು ಆಕ್ಷೇಪಿಸಿದ್ದ ಮೂರ್ತಿ, ಸಚ್ಚಿನ್ ಹಲ್ಲೆ ನಡೆಸಿದ್ದರು. ಈ ಸಂಬಂಧ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಆರೋಪಿಗಳಾದ ಮೂರ್ತಿ, ಸಚ್ಚಿನ್ ಅವರು ದಿಲೀಪ, ಪ್ರಸನ್ನ ಮತ್ತು ಮಧುಕರ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಅಲ್ಲದೆ, ತಡೆಯಲು ಬಂದ ಸೌಭಾಗ್ಯ ಮತ್ತು ಚಂದನ ಅವರ ಮೇಲೂ ಹಲ್ಲೆ ನಡೆಸಿದ್ದರು.
ಈ ಘಟನೆ ಸಂಬಂಧ ಹಲ್ಲೆಗೊಳದಾವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಜಾತಿ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಪ್ರಕರಣವನ್ನು ಜಯಪುರ ಠಾಣೆ ಪೊಲೀಸರು ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.