ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಕುರಿತು ಚರ್ಚೆ: ಸಚಿವ ಸುಧಾಕರ್
ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆ ಏರಿಕೆಯ ಹಾದಿ ಮುಂದುವರೆದಿದೆ. ಈ ನಡುವಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಮಿತಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಾಸಿಟಿವ್ ಪ್ರಕರಣಗಳು, ಆಸ್ಪತ್ರೆಗೆ ಸೇರುವವರು, ಮಕ್ಕಳ ಹಾಗೂ ವೀಕೆಂಡ್ ಕರ್ಫ್ಯೂ ಬಗ್ಗೆ ಚರ್ಚೆ ನಡೆಯಲಿದೆ ಎಂದು ಆರೋಗ್ಯ ಸಚಿವ ಸುಧಾಕರ್...
Published: 17th January 2022 12:57 PM | Last Updated: 17th January 2022 01:42 PM | A+A A-

ಸಚಿವ ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ 3ನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆ ಏರಿಕೆಯ ಹಾದಿ ಮುಂದುವರೆದಿದೆ. ಈ ನಡುವಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಮಿತಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಪಾಸಿಟಿವ್ ಪ್ರಕರಣಗಳು, ಆಸ್ಪತ್ರೆಗೆ ಸೇರುವವರು, ಮಕ್ಕಳ ಹಾಗೂ ವೀಕೆಂಡ್ ಕರ್ಫ್ಯೂ ಬಗ್ಗೆ ಚರ್ಚೆ ನಡೆಯಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಕೇಸ್, ಆಸ್ಪತ್ರೆಗೆ ಸೇರ್ಪಡೆ, ಮಕ್ಕಳ ಸ್ಥಿತಿಗತಿ ಬಗ್ಗೆ ಸಭೆ ಆಗುತ್ತೆ. ತಜ್ಞರು, ಸಚಿವರು ಸಭೆಯಲ್ಲಿ ಇರುತ್ತಾರೆ. ತಜ್ಞರ ಸಭೆ ಬಳಿಕ ನಿರ್ಧಾರ ಘೋಷಣೆ ಮಾಡುತ್ತೇವೆ. ವೀಕೆಂಡ್ ಕರ್ಫ್ಯೂ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ನಮ್ಮ ಕೆಲಸ. ಹೆಚ್ಚು ಸಾವು ನೋವು ಆಗಬಾರದು ಎಂಬುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬಳಿಕ ಕಠಿಣ ನಿಯಮಗಳು ಮುಂದುವರೆಯುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇಂದು ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಈ ಕುರಿತು ತೀರ್ಮಾನವಾಗುತ್ತೆ ಎಂದರು.
ಇದನ್ನೂ ಓದಿ: ಕೋವಿಡ್ ಮೂರನೇ ಅಲೆಯಲ್ಲಿ ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಕಡಿಮೆ- ಅಧ್ಯಯನ
ರಾಜ್ಯದಲ್ಲಿ ನೆಗಡಿ, ಶೀತ ಹೆಚ್ಚಳ ವಿಚಾರವಾಗಿ ಮಾತನಾಡಿ, ಇದು ಸೀಸನಲ್ ಫ್ಲೂ. ಡಿಸೆಂಬರ್ ನಿಂದ ಫೆಬ್ರವರಿ ವರೆಗೂ ಪ್ರತಿ ವರ್ಷ ಇದು ಇರುತ್ತದೆ. ಈ ಲಕ್ಷಣ ಇರುವವರಿಗೆ ಆದ್ಯತೆ ಮೇಲೆ ಪರೀಕ್ಷೆ ಮಾಡುತ್ತೇವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಾವು ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದ್ದು, ಆಸ್ಪತ್ರೆಗೆ ಸೇರುವವರ ಪ್ರಮಾಣವೂ ಕಡಿಮೆ ಇದೆ. ನಾವು ಮುಂಚಿತವಾಗಿ ಎಲ್ಲಾ ಕ್ರಮಗಳನ್ನ ತೆಗೆದುಕೊಂಡಿರುವುದರಿಂದ ನಮ್ಮಲ್ಲಿ ವೈರಸ್ ನಿಯಂತ್ರಣದಲ್ಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಬೆಳಗಾವಿ ಮಕ್ಕಳ ಸಾವಿನ ಪ್ರಕರಣ ಕುರಿತು ಮಾತನಾಡಿ, ಮಕ್ಕಳು ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್ನಿಂದ ಸತ್ತಿರೋ ಬಗ್ಗೆ ವರದಿ ಆಗಿದೆ. ಆದರೂ ಮತ್ತೊಂದು ತನಿಖೆಗೆ ಸೂಚನೆ ನೀಡಿದ್ದೇನೆ. ಎರಡು ದಿನಗಳಲ್ಲಿ ವರದಿ ಕೊಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಸೂಚಿನೆ ನೀಡಲಾಗಿದೆ. ಅಲ್ಲಿನ ಎಎನ್ಎಂ ಮತ್ತು ಫಾರ್ಮಸಿಸ್ಟ್ರನ್ನ ಕೂಡಲೇ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ನೋಡಲ್ ಅಧಿಕಾರಿಗಳನ್ನ ತನಿಖೆಗೆ ಕಳುಹಿಸುತ್ತಿದ್ದೇನೆ. ಎರಡು ದಿನಗಳಲ್ಲಿ ವರದಿ ಕೈಸೇರಲಿದೆ ಎಂದು ತಿಳಿಸಿದರು.