ರಾಷ್ಟ್ರೀಯ ಸ್ಟಾರ್ಟ್'ಅಪ್ ಅವಾರ್ಡ್ಸ್ 2021: 'ಸ್ಟಾರ್ಟ್ ಅಪ್ ಹಬ್' ಸ್ಥಾನ ಉಳಿಸಿಕೊಂಡ ಬೆಂಗಳೂರು!
ಅಖಿಲ ಭಾರತ ಮಟ್ಟದಲ್ಲಿ ಮೊದಲ ಬಾರಿಗೆ ನಡೆದ `ರಾಷ್ಟ್ರೀಯ ಸ್ಟಾರ್ಟ್'ಅಪ್ ಅವಾರ್ಡ್ಸ್ 2021’ ರಲ್ಲಿ ವಿವಿಧ ವಲಯಗಳಲ್ಲಿ ರಾಜ್ಯದ 14 ನವೋದ್ಯಮಗಳು ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಈ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು 'ಸ್ಟಾರ್ಟ್ ಅಪ್'ಗಳ ಹಬ್' ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.
Published: 17th January 2022 01:25 PM | Last Updated: 17th January 2022 01:47 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಅಖಿಲ ಭಾರತ ಮಟ್ಟದಲ್ಲಿ ಮೊದಲ ಬಾರಿಗೆ ನಡೆದ `ರಾಷ್ಟ್ರೀಯ ಸ್ಟಾರ್ಟ್'ಅಪ್ ಅವಾರ್ಡ್ಸ್ 2021’ ರಲ್ಲಿ ವಿವಿಧ ವಲಯಗಳಲ್ಲಿ ರಾಜ್ಯದ 14 ನವೋದ್ಯಮಗಳು ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಈ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು 'ಸ್ಟಾರ್ಟ್ ಅಪ್'ಗಳ ಹಬ್' ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.
ಈ ಕುರಿತು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್ ಅಶ್ವತ್ಥ್ ನಾರಾಯಣ್ ಅವರು ಮಾಹಿತಿ ನೀಡಿದ್ದು, ರಾಷ್ಟ್ರ ಮಟ್ಟದಲ್ಲಿ 46 ನವೋದ್ಯಮಗಳಿಗೆ ಪ್ರಶಸ್ತಿ ನೀಡಿದ್ದು, ಅವುಗಳಲ್ಲಿ ಸಿಂಹ ಪಾಲು (14) ಕರ್ನಾಟಕದ ಸಂಸ್ಥೆಗಳಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ.
ನಫಾ ಇನ್ನೋವೇಷನ್ಸ್, ಉಂಬೋ ಇಡ್-ಟೆಕ್ (ಫಿನ್ಟೆಕ್), ಥಿಂಕರ್ ಬೆಲ್ ಲ್ಯಾಬ್ಸ್ (ಎಡುಟೆಕ್), ಸಿಂಪ್ಲೋಟೆಲ್ ಟೆಕ್ನಾಲಜೀಸ್ (ಪ್ರವಾಸ ಮತ್ತು ಆತಿಥ್ಯೋದ್ಯಮ), ಬ್ಲಿಂಕಿನ್ ಟೆಕ್ನಾಲಜೀಸ್ (ಆಗ್ಮೆಂಟೆಡ್ ರಿಯಾಲಿಟಿ), ಟ್ಯಾಗ್ ಬಾಕ್ಸ್ ಸೊಲ್ಯೂಷನ್ಸ್ (ಐಒಟಿ), ಶಾಪೋಸ್ ಸರ್ವೀಸಸ್, ಆತ್ರೇಯ ಗ್ಲೋಬಲ್ ಸೊಲ್ಯೂಷನ್ಸ್, ಝೆನ್ ಟ್ರಾನ್ ಲ್ಯಾಬ್ಸ್ ಪ್ರೈ.ಲಿ. (ಕೃಷಿ), ಲೀಡ್ ಸ್ಕ್ವೇರ್ಡ್ (ಗ್ರಾಹಕ ಸಂಬಂಧ), ಲಿಯೂಸಿನ್ ರಿಚ್ ಬಯೋ ಪ್ರೈ.ಲಿ. (ಜೀವವಿಜ್ಞಾನ), ಸ್ಟೆಲ್ ಆಪ್ಸ್ (ಪಶು ಸಂಗೋಪನೆ), 1ಬ್ರಿಡ್ಜ್ (ಲಾಜಿಸ್ಟಿಕ್ಸ್) ಮತ್ತು ಸ್ಟೆರಡಿಯನ್ ಸೆಮಿ (ಸಾರಿಗೆ ನಿರ್ವಹಣೆ)- ಇವು ಪುರಸ್ಕೃತ ಕಂಪನಿಗಳಾಗಿವೆ.
ಇದನ್ನೂ ಓದಿ: ರಕ್ಷಣಾ ವಲಯದ ವ್ಯಾಪ್ತಿಯನ್ನು ಸ್ಟಾರ್ಟ್ಅಪ್ಗಳಿಗೆ ವಿವರಿಸಲಾಗುವುದು: ತಜ್ಞರು
ಈ ವರ್ಷ ಪ್ರಶಸ್ತಿಗಾಗಿ ದೇಶಾದ್ಯಂತ 2,173 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 549 ಕರ್ನಾಟಕದಿಂದ ಬಂದಿವೆ. 75 ಸ್ಟಾರ್ಟ್ ಅಪ್ಗಳಿಗೆ ಅಮೃತ ಯೋಜನೆಯಡಿ ಫಂಡ್ ನೀಡಲಾಗಿದೆ. ಈ ವರ್ಷ 200 ಸ್ಟಾರ್ಟ್ ಅಪ್ ಕಂಪನಿಗಳಿಗೆ ಸೀಡ್ ಫಂಡ್ ಕೊಟ್ಟಿದ್ದೇವೆ. 50 ಲಕ್ಷ ರೂಪಾಯಿವರೆಗೆ ಸೀಡ್ ಫಂಡ್ ಕೊಡುತ್ತೇವೆ. ಮಹಿಳೆಯರು ಪ್ರಾರಂಭಿಸಿದ ಸ್ಟಾರ್ಟ್ಅಪ್ಗಳಿಗೆ ಧನಸಹಾಯ ನೀಡಲು ರಾಜ್ಯವು ಎಲಿವೇಟ್ ವುಮೆನ್ ಯೋಜನೆಯನ್ನು ಕೂಡ ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಈ ಕ್ಷೇತ್ರದಲ್ಲಿ ರಾಜ್ಯದ ಪ್ರಮುಖ ಸ್ಥಾನವನ್ನು ಕಾಯ್ದುಕೊಳ್ಳಲು, ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ ಎಂದು ತಿಳಿಸಿದರು.