ರಾತ್ರಿ ಕರ್ಫ್ಯೂ ವಿರುದ್ಧ ಬಿಜೆಪಿಯಲ್ಲೇ ವಿರೋಧ; ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ
ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ತಡೆಯಲು ಲಾಕ್ ಡೌನ್ ಮತ್ತು ವಾರಾಂತ್ಯ ಕರ್ಫ್ಯೂ ಜಾರಿ ಮಾಡುವುದಕ್ಕೆ ಬಿಜೆಪಿ ನಾಯಕರಲ್ಲೇ ವಿರೋಧ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೊರೋನಾ ಸೋಂಕು ತಡೆಗೆ ವಾರಾಂತ್ಯ ಕರ್ಫ್ಯೂ ಜಾರಿ ಅಗತ್ಯವಿಲ್ಲ ಎಂದಿದ್ದಾರೆ.
Published: 18th January 2022 06:06 PM | Last Updated: 18th January 2022 06:43 PM | A+A A-

ಪ್ರಹ್ಲಾದ್ ಜೋಷಿ, ಸಿಟಿ ರವಿ, ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ತಡೆಯಲು ಲಾಕ್ ಡೌನ್ ಮತ್ತು ವಾರಾಂತ್ಯ ಕರ್ಫ್ಯೂ ಜಾರಿ ಮಾಡುವುದಕ್ಕೆ ಬಿಜೆಪಿ ನಾಯಕರಲ್ಲೇ ವಿರೋಧ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೊರೋನಾ ಸೋಂಕು ತಡೆಗೆ ವಾರಾಂತ್ಯ ಕರ್ಫ್ಯೂ ಜಾರಿ ಅಗತ್ಯವಿಲ್ಲ ಎಂದಿದ್ದಾರೆ.
ವಾರಾಂತ್ಯ ಕರ್ಫ್ಯೂ ಆರ್ಥಿಕತೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಇದರ ಸಡಿಲಿಕೆ ಅಗತ್ಯವಾಗಿದೆ. ಈ ಕುರಿತಂತೆ ತಾವು ಮುಖ್ಯಮಂತ್ರಿಗಳಿಗೆ ವೈಯಕ್ತಿಕ ಸಲಹೆ ನೀಡಿದ್ದು, ಚರ್ಚೆ, ಪರಾಮರ್ಶೆಗಳ ನಂತರ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಜೋಶಿ ಹೇಳಿದರು. ಪಣಜಿಯಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕೂಡಾ ವಾರಾಂತ್ಯ ಕರ್ಫ್ಯೂ, ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಈ ಬಾರಿ ಕೊರೋನಾ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಎರಡನೇ ಅಲೆಯಲ್ಲಿ ಇದಷ್ಟು ತೀವ್ರತೆ ಇಲ್ಲ. ನೈಟ್ ಕರ್ಫ್ಯೂನಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾತ್ರಿ ಕರ್ಫ್ಯೂವಿನಿಂದ ಕೊರೋನಾ ತಡೆಯಬಹುದೆಂದು ತಜ್ಞರು ವರದಿ ಕೊಟ್ಟಿದ್ದಾರೆ. ಆದರೆ, ಇದರಿಂದ ಕೂಲಿ ಕಾರ್ಮಿಕರಿಗೆ ತೊಂದರೆ, ಅವರ ಬದುಕಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.