ಜನವರಿ 26ರಿಂದ ರಾಜ್ಯದ 12 ಜಿಲ್ಲೆಗಳಲ್ಲಿ 'ಗ್ರಾಮ ಒನ್ ಯೋಜನೆ' ಜಾರಿ
ಗ್ರಾಮ ಮಟ್ಟದಲ್ಲಿ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ರಾಮ ಒನ್’ ಯೋಜನೆಯು ಜನವರಿ 26 ರಿಂದ 12 ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದ್ದು, ಈ ಉದ್ದೇಶಕ್ಕಾಗಿ ಸುಮಾರು 3,000 ‘ಗ್ರಾಮ ಒನ್’ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.
Published: 18th January 2022 10:24 AM | Last Updated: 18th January 2022 01:42 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಗ್ರಾಮ ಮಟ್ಟದಲ್ಲಿ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ರಾಮ ಒನ್’ ಯೋಜನೆಯು ಜನವರಿ 26 ರಿಂದ 12 ಜಿಲ್ಲೆಗಳಲ್ಲಿ ಪ್ರಾರಂಭವಾಗಲಿದ್ದು, ಈ ಉದ್ದೇಶಕ್ಕಾಗಿ ಸುಮಾರು 3,000 ‘ಗ್ರಾಮ ಒನ್’ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.
ಈ ಯೋಜನೆಯ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವರ್ಚುವಲ್ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ‘ಜ.26ರಂದು 12 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಬಳಿಕ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಪ್ರಮುಖ ಇಲಾಖೆಗಳ ಎಲ್ಲಾ ಸೇವೆಗಳು ಗ್ರಾಮೀಣ ಜನರಿಗೆ ಸುಲಭವಾಗಿ ಸಿಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರದ ಪ್ರಾಯೋಗಿಕ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ
ಬೆಂಗಳೂರು ಒನ್, ಕರ್ನಾಟಕ ಒನ್ ಮಾದರಿ ಈ ಯೋಜನೆಯು ಮೊದಲ ಹಂತದಲ್ಲಿ ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಟ್ಟು 3 ಸಾವಿರ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಕಂದಾಯ, ಆಹಾರ, ಆರೋಗ್ಯ, ಕಾರ್ಮಿಕ ಸೇರಿದಂತೆ ವಿವಿಧ ಇಲಾಖೆಗಳ ಅಂದಾಜು 100 ಸೇವೆಗಳು ಗ್ರಾಮ ಒನ್ ಕೇಂದ್ರದಲ್ಲಿ ಲಭ್ಯವಾಗಲಿವೆ. ಈ ಕೇಂದ್ರಗಳಿಗೆ ನಿರಂತರ ವಿದ್ಯುತ್ ಹಾಗೂ ಅಂತರ್ಜಾಲ (ಇಂಟರ್ನೆಟ್) ಸಂಪರ್ಕ ಕಲ್ಪಿಸಲಾಗುವುದು ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದರು.