ಸಚಿವರು, ಶಾಸಕರು ಸೇರಿದಂತೆ ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ
10-12 ದಿನಗಳ ಕಾಲ ಕ್ವಾರಂಟೈನ್ ಇದ್ದು ಕೋವಿಡ್ ನೆಗೆಟಿವ್ ವರದಿ ಬಂದಿದ್ದು ಇದೀಗ ಸಂಪೂರ್ಣ ಗುಣಮುಖನಾಗಿರುವುದರಿಂದ ಇಂದು ಬುಧವಾರದಿಂದ ದೈನಂದಿನ ಕೆಲಸ ಕಾರ್ಯಗಳು ಕಚೇರಿಯಲ್ಲಿ ಮುಂದುವರಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 19th January 2022 10:12 AM | Last Updated: 19th January 2022 02:51 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: 10-12 ದಿನಗಳ ಕಾಲ ಕ್ವಾರಂಟೈನ್ ಇದ್ದು ಕೋವಿಡ್ ನೆಗೆಟಿವ್ ವರದಿ ಬಂದಿದ್ದು ಇದೀಗ ಸಂಪೂರ್ಣ ಗುಣಮುಖನಾಗಿರುವುದರಿಂದ ಇಂದು ಬುಧವಾರದಿಂದ ದೈನಂದಿನ ಕೆಲಸ ಕಾರ್ಯಗಳು ಕಚೇರಿಯಲ್ಲಿ ಮುಂದುವರಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿನ್ನೆ ಜಿಲ್ಲಾಧಿಕಾರಿಗಳ ಸಭೆಯನ್ನು ವರ್ಚುವಲ್ ಮಾಡಲಾಗಿದ್ದು, ಯಾವ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆಯ ಕೊರತೆಯಿದೆಯೋ ಅಲ್ಲಿ ಲಸಿಕೆ ಪ್ರಮಾಣ ಹೆಚ್ಚು ಮಾಡಬೇಕೆಂದು ವಿಶೇಷವಾಗಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದು, ಕೋವಿಡ್ ವಾರಿಯರ್ಸ್ ಗೆ ಇನ್ನಷ್ಟು ತೀವ್ರಗತಿಯಲ್ಲಿ ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.
ರೂಲ್ಸ್ ಉಲ್ಲಂಘಿಸಿದವರ ವಿರುದ್ಧ ಕ್ರಮ: ಕೋವಿಡ್ ನಿಯಮ ಉಲ್ಲಂಘಿಸಿದವರು ಯಾರೇ ಆಗಿದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ನಿನ್ನೆ ಮುಖ್ಯ ಕಾರ್ಯದರ್ಶಿಗಳು ಲಿಖಿತ ಆದೇಶ ಹೊರಡಿಸಿದ್ದಾರೆ. ಅದು ಯಾವುದೇ ಪಕ್ಷದವರಾಗಿದ್ದರೂ, ಯಾವ ಸಂಘಟನೆಯಾದರೂ ಕೋವಿಡ್ ನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಕಾಂಗ್ರೆಸ್ ನವರು ದೂರು ನೀಡಬೇಕಾಗಿಲ್ಲ, ನಾವೇ ಸ್ವಯಂಪ್ರೇರಣೆಯಿಂದ ಮಾಡುತ್ತೇವೆ ಎಂದರು.
ಶುಕ್ರವಾರ ನಿರ್ಧಾರ: ವೀಕೆಂಡ್ ಕರ್ಫ್ಯೂ(Weekend curfew) ಬೇಡ, ವ್ಯಾಪಾರ-ವಹಿವಾಟು ನಮ್ಮ ಬದುಕಿಗೆ ಬಹಳ ಕಷ್ಟವಾಗುತ್ತಿದೆ ಎಂದು ಈಗಾಗಲೇ ಹಲವರು ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಬಹಳ ಒತ್ತಡ ಹಾಕುತ್ತಿದ್ದಾರೆ. ಒಂದೆಡೆ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರಿಸಬೇಕಾ ಅಥವಾ ರದ್ದುಪಡಿಸಬೇಕಾ ಎಂಬ ಗೊಂದಲದಲ್ಲಿ ಸರ್ಕಾರವಿದೆ.
ಹೀಗಿರುವಾಗ ಇನ್ನೆರಡು ದಿನಗಳಲ್ಲಿ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ, ನಮ್ಮ ರಾಜ್ಯದ ಜಿಲ್ಲೆಗಳಲ್ಲಿನ ಸ್ಥಿತಿಗತಿ ನೋಡಿಕೊಂಡು ವರದಿ ತಯಾರಿಸುತ್ತಿದ್ದಾರೆ. ಅವರು ಶುಕ್ರವಾರ ವರದಿ ನೀಡಲಿದ್ದು ಅದರ ಆಧಾರದ ಮೇಲೆ ಚರ್ಚೆ ಮಾಡಿ ಅಂದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶುಕ್ರವಾರ ತಜ್ಞರ ಜೊತೆ ಸಭೆ ನಡೆಸುತ್ತೇನೆ. ಈಗಾಗಲೇ ಹೇರಿರುವ ನಿರ್ಬಂಧಗಳನ್ನು ಪುನರ್ ಪರಿಶೀಲನೆ ಮಾಡುತ್ತೇವೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಆಸ್ಪತ್ರೆಗಳಿಗೆ ಹೋಗಿ ದಾಖಲಾಗುವವರ ಸಂಖ್ಯೆ ಅಷ್ಟೊಂದು ಇಲ್ಲ. ಆಸ್ಪತ್ರೆಗಳಲ್ಲಿ ಒಪಿಡಿ ವಾರ್ಡ್ ಗಳಲ್ಲಿ ಸೋಂಕಿತರು ಹೆಚ್ಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಜ್ಞರು ಹೇಳುವುದರ ಮೇಲೆ ಸರ್ಕಾರ ನಿರ್ಧರಿಸುತ್ತದೆ ಎಂದರು.
Whoever violates covid norms, let them be from any Sangha or Sanghatane, even MLA or ministers, action will be taken against them said @CMofKarnataka when asked his own party MLAs and Ministers violated covid norms @NewIndianXpress @santwana99 @ramupatil_TNIE pic.twitter.com/8jtq1Tdaba
— Ashwini M Sripad/ಅಶ್ವಿನಿ ಎಂ ಶ್ರೀಪಾದ್
ಶೇಕಡಾ 94ರಷ್ಟು ಸೋಂಕಿತರು ಕೋವಿಡ್ ಮೂರನೇ ಅಲೆಯಲ್ಲಿ ಹೋಂ ಐಸೊಲೇಷನ್ ನಲ್ಲಿದ್ದಾರೆ. ಆರೋಗ್ಯ ಇಲಾಖೆ ಅವರ ಮೇಲೆ ಗಮನ ನೀಡಬೇಕು. ನಿರಂತರವಾಗಿ ಸಂಪರ್ಕದಲ್ಲಿದ್ದು, ಪತ್ತೆಹಚ್ಚಿ ಔಷಧಿ ಕಿಟ್ ಗಳನ್ನು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪುನರ್ ಪ್ರಾರಂಭ ಮಾಡಲು ಸೂಚನೆ ನೀಡಿದ್ದೇನೆ. ಬೂಸ್ಟರ್ ಡೋಸ್ ಗಳನ್ನು ಫಲಾನುಭವಿಗಳನ್ನು ಗುರುತಿಸಿ ನೀಡಬೇಕೆಂದು ಕೂಡ ಸೂಚಿಸಿದ್ದೇನೆ ಎಂದರು.