ಅಪರಾಧ ಕೃತ್ಯಗಳಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿ ವಜಾಗೊಳಿಸುವುದೇ ಸೂಕ್ತ: ಗೃಹ ಸಚಿವ ಆರಗ ಜ್ಞಾನೇಂದ್ರ
ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
Published: 20th January 2022 04:46 PM | Last Updated: 20th January 2022 06:19 PM | A+A A-

ಆರಗ ಜ್ಞಾನೇಂದ್ರ
ಬೆಂಗಳೂರು: ಸಮಾಜ ವಿರೋಧಿ ಶಕ್ತಿಗಳೊಂದಿಗೆ ಗುರುತಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ನಗರದ ಚಾಮರಾಜಪೇಟೆಯ ಸಂಚಾರಿ ಪೊಲೀಸ್ ಠಾಣೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದ ಇಬ್ಬರು ಪೊಲೀಸ್ ಪೇದೆಗಳು ಗಾಂಜಾ ಮಾರಾಟ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ದೂರುಗಳು ಕೇಳಿಬಂದಿದ್ದು, ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಅಸಮಧಾನವ್ಯಕ್ತಪಡಿಸಿದರು. ಕೆಲವೇ ಕೆಲವು ಪೊಲೀಸರು ಇಂತಹ ಕೃತ್ಯದಲ್ಲಿ ಶಾಮೀಲಾಗುವುದರಿಂದ ಇತರ ದಕ್ಷ ಸಿಬ್ಬಂದಿಯಲ್ಲಿ ನಂಬಿಕೆಯೇ ಇಲ್ಲದಂತಾಗುತ್ತದೆ ಎಂದರು.
ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಇಲಾಖೆಯಿಂದಲೇ ಶಾಶ್ವತವಾಗಿ ವಜಾ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಗಾಂಜಾ ಮಾರಾಟದಲ್ಲಿ ಭಾಗಿಯಾಗಿರುವ ಪೊಲೀಸರ ಕುರಿತು ಸಂಪೂರ್ಣ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ನಿವಾಸದ ಬಳಿಯೇ ಪೆಡ್ಲರ್ ಗಳ ಜೊತೆ ಗಾಂಜಾ ದಂಧೆಗಿಳಿದಿದ್ದ ಇಬ್ಬರು ಪೊಲೀಸರ ಬಂಧನ!
ಕೋರಮಂಗಲ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಮಾದಕ ದ್ರವ್ಯ ದಂಧೆಕೋರನೊಬ್ಬನ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಇಬ್ಬರನ್ನೂ ಬಂಧಿಸಲಾಗಿತ್ತು.
ಬಂಧಿತ ಪೊಲೀಸರನ್ನು ಮುಖ್ಯ ಪೇದೆ ಶಿವಕುಮಾರ್ ಹಾಗೂ ಪೇದೆ ಸಂತೋಷ್ ಎಂದು ಗುರ್ತಿಸಲಾಗಿದೆ. ಜನವರಿ 13ರಂದು ಮುಖ್ಯಮಂತ್ರಿಗಳ ಖಾಸಗಿ ನಿವಾಸದ ಬಳಿಯೇ ಘಟನೆ ನಡೆದಿದೆ.