ಬಾಗಲಕೋಟೆ: ಫಾರ್ಮ್‌ಹೌಸ್‌ನಲ್ಲಿ ಬೃಹತ್ ಸ್ಫೋಟಕಗಳ ಸಂಗ್ರಹ ಪತ್ತೆ, ಇಬ್ಬರ ಬಂಧನ
ಬಾಗಲಕೋಟೆ ಸಮೀಪದ ಹೊನ್ನಕಟ್ಟಿ ಗ್ರಾಮದ ತೋಟದ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಬಾಗಲಕೋಟೆ ಗ್ರಾಮಾಂತರ ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ.
Published: 20th January 2022 03:21 PM | Last Updated: 20th January 2022 03:21 PM | A+A A-

ಫಾರ್ಮ್‌ಹೌಸ್‌ನಲ್ಲಿ ಬೃಹತ್ ಸ್ಫೋಟಕಗಳ ಸಂಗ್ರಹ ಪತ್ತೆ
ಬಾಗಲಕೋಟೆ: ಬಾಗಲಕೋಟೆ ಸಮೀಪದ ಹೊನ್ನಕಟ್ಟಿ ಗ್ರಾಮದ ತೋಟದ ಮನೆಯಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಬಾಗಲಕೋಟೆ ಗ್ರಾಮಾಂತರ ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಿಲ್ಲಾ ಕೇಂದ್ರದಿಂದ 7 ಕಿ.ಮೀ ದೂರದಲ್ಲಿರುವ ಹೊನ್ನಕಟ್ಟಿ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯ ಮೇಲೆ ದಾಳಿ ನಡೆಸಿದ್ದು, ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 500 ಕೆಜಿ ಸ್ಫೋಟಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ಹಳೆ ಬಾಗಲಕೋಟೆ ಪಟ್ಟಣದ ನಿವಾಸಿಗಳಾದ ವಿಜಯ್(30) ಮತ್ತು ಮಂಜುನಾಥ್(30) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, “ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಯಿತು. 250 ಕೆಜಿ ಗನ್ ಪೌಡರ್, 150 ಕೆಜಿ ಸೋಡಿಯಂ ನೈಟ್ರೇಟ್, 52 ಕೆಜಿ ಇದ್ದಿಲು ಪುಡಿ ಮತ್ತು 50 ಕೆಜಿ ಸಲ್ಫರ್ ಸೇರಿದಂತೆ ಸುಮಾರು 500 ಕೆಜಿ ಸ್ಫೋಟಕಗಳು ಪತ್ತೆಯಾಗಿವೆ.
“ಸ್ಫೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದ್ದು, ಅವುಗಳನ್ನು ಸುತ್ತಮುತ್ತಲಿನ ಗ್ರಾನೈಟ್ ಮತ್ತು ಕಲ್ಲು ಕ್ವಾರಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳು ಸ್ಫೋಟಕಗಳನ್ನು ಪೂರೈಸಲು ಯಾವುದೇ ಪರವಾನಗಿ ಹೊಂದಿಲ್ಲ. ಇಬ್ಬರನ್ನು ಬಂಧಿಸಲಾಗಿದ್ದು, ಆದಷ್ಟು ಬೇಗ ಪ್ರಮುಖ ಆರೋಪಿಯನ್ನು ಬಂಧಿಸಲಾಗುವುದು. ಈ ಸ್ಫೋಟಕಗಳ ಮೂಲವನ್ನು ಇನ್ನೂ ಪತ್ತೆ ಮಾಡಲಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಈ ಸಂಬಂಧ ಬಾಗಲಕೋಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.