ಜನರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರ ಹೊಂದಿಲ್ಲ, ಹೋಂ ಐಸೊಲೇಷನ್ ನಲ್ಲಿರುವವರಿಗೆ ಕಿಟ್ ವಿತರಣೆ: ಸಚಿವ ಡಾ ಕೆ ಸುಧಾಕರ್
ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
Published: 20th January 2022 01:50 PM | Last Updated: 20th January 2022 01:53 PM | A+A A-

ಡಾ ಕೆ ಸುಧಾಕರ್
ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದ ಜನರು ಮತ್ತು ಅವರ ಆರೋಗ್ಯದ ದೃಷ್ಟಿಯಿಂದ ಯಾವ ಕ್ರಮದ ಅವಶ್ಯಕತೆ ಇದೆ, ಸೋಂಕು ನಿಯಂತ್ರಣ ಮಾಡುವುದು ಹೇಗೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ವೈಜ್ಞಾನಿಕ ನೆಲೆಯಲ್ಲಿ ಎಲ್ಲರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತಾರೆ. ಜನರ ಸಂಕಷ್ಟ ಮತ್ತು ಭಾವನೆಗಳಿಗೆ ಸ್ಪಂದಿಸುತ್ತಾರೆ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಕೊಡುವಂತಹ ನಿರ್ಣಯ ಕೈಗೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕೊರೋನಾ ಲಸಿಕೆಯಿಂದ ಪ್ರಾಣ ರಕ್ಷಣೆ, ಶುಕ್ರವಾರ ರಾಜ್ಯದ ಕೊರೋನಾ ನಿಯಮ ಭವಿಷ್ಯ ನಿರ್ಧಾರ: ಡಾ ಕೆ ಸುಧಾಕರ್
ಈ ಹಿಂದೆ ಕಠಿಣ ನಿರ್ಬಂಧ ಕೈಗೊಂಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅನಿವಾರ್ಯ ಸಂದರ್ಭದಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗಿತ್ತು. ಜನರಿಗೆ ತೊಂದರೆ ಕೊಡುವುದರಿಂದ ಸರ್ಕಾರಕ್ಕೆ ಯಾವುದೇ ಲಾಭ ಅಥವಾ ಆದಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೋಮ್ ಐಸೋಲೇಷನ್ ಕಿಟ್ ವಿತರಣೆ: ಕರೋನಾ 3ನೇ ಅಲೆಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೋಮ್ ಐಸೋಲೇಷನ್ ಕಿಟ್ ಗಳನ್ನು ಬೆಂಗಳೂರಿನಲ್ಲಿ ಈಗಾಗಲೇ ವಿತರಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲೆಗಳಿಗೂ ಈ ಕಿಟ್ ಗಳನ್ನು ಕಳುಹಿಸಲಾಗುವುದು ಎಂದರು.