ನನ್ನ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸಲು ನಡೆಸುತ್ತಿರುವ ಪಿತೂರಿ ಇದು ಎಂದ ನಲಪಾಡ್; ದೂರು ಬಂದಿಲ್ಲ ಎಂದ ಗೃಹ ಸಚಿವ
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಯೂತ್ ಕಾಂಗ್ರೆಸ್ ಸಭೆ ನಡೆಸಲಾಗಿತ್ತು.
Published: 20th January 2022 01:37 PM | Last Updated: 20th January 2022 01:45 PM | A+A A-

ಮೊಹಮ್ಮದ್ ಹ್ಯಾರಿಸ್ ನಲಪಾಡ್
ಬೆಂಗಳೂರು: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಯೂತ್ ಕಾಂಗ್ರೆಸ್ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ನಲಪಾಡ್ ಪದಗ್ರಹಣ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿತ್ತು. ಚರ್ಚೆ ನಂತರ ನಿನ್ನೆ ರಾತ್ರಿ ಯಲಹಂಕ ಬಳಿಯ ಕ್ಲಬ್ನಲ್ಲಿ ಪಾರ್ಟಿ ನಡೆಸಿದ್ದು, ಪಾರ್ಟಿ ವೇಳೆ ಹಳ್ಳೇಗೌಡನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ನಲಪಾಡ್ ಖಾಸಗಿ ಹೋಟೆಲ್ ಒಂದರಲ್ಲಿ ಮಧ್ಯಾಹ್ನ ಗೆಟ್ ಟುಗೆದರ್ ರೀತಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದರು. ಅಲ್ಲಿ ನಲಪಾಡ್ ಮುಂದಿನ ಅಧ್ಯಕ್ಷನಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತೇನೆ ಎಂದು ಪ್ರಸ್ತಾಪಿಸಿದರು. ಮತ್ತು ರಾತ್ರಿ ಯಲಹಂಕದ ಒಂದು ಕ್ಲಬ್ ನಲ್ಲಿ ಭೋಜನಕ್ಕೆ ಕರೆದು, ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಹಳ್ಳೇಗೌಡ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್ ಗೌಡ ಅವರ ಸದಸ್ಯ ಎಂದು ತಿಳಿದು ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪವಾಗಿದೆ.
ಇಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮತ್ತು ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬೆಂಬಲಿಗರ ಮಧ್ಯೆ ಗಲಭೆ ನಡೆದು ನಡೆದ ಹಲ್ಲೆ ಎಂದು ಹೇಳಲಾಗುತ್ತಿದೆ.
ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ನಲಪಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನನ್ನಿಂದ ತಪ್ಪಿಸಲು ಬೇಕೆಂದೇ ಹಲವರು ಮಾಡುತ್ತಿರುವ ಪಿತೂರಿ ಇದು, ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ. ನನಗೂ ಈ ಹಲ್ಲೆ ಘಟನೆಗೂ ಸಂಬಂಧವಿಲ್ಲ, ಹಲ್ಲೆ ನಡೆದಿದ್ದು ನನಗೆ ಗೊತ್ತಿಲ್ಲ, ನಾನು ಸ್ಥಳದಲ್ಲಿ ಇರಲೇ ಇಲ್ಲ, ನನಗೆ ಇಂದು ಬೆಳಗ್ಗೆ ಗೊತ್ತಾಯಿತಷ್ಟೆ, ಬೇಕೆಂದಲೇ ನನ್ನ ಹೆಸರನ್ನು ಎಳೆದುತಂದು ವಿವಾದ ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ಮೊಹಮ್ಮದ್ ನಲಪಾಡ್ ಹೇಳಿದ್ದೇನು: ಬೆಂಗಳೂರಿನಲ್ಲಿ ನಿನ್ನೆ ನಾವು ಸಭೆ ಸೇರಿದ್ದು ನಿಜ. ಯುವ ಕಾಂಗ್ರೆಸ್ ನಲ್ಲಿ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದ್ದೇವೆ. ನಿನ್ನೆ ರಾತ್ರಿ ಹುಡುಗರು ಸೇರಿ ಪಾರ್ಟಿ ಮಾಡಿದ್ದಾರೆ. ನಾನು ರಾತ್ರಿ 9.30ರ ಸುಮಾರಿಗೆ ಮನೆಗೆ ವಾಪಸಾಗಿದ್ದೆ. ಅಲ್ಲಿ ಯಾವುದೇ ರೀತಿಯ ಹಲ್ಲೆ ಘಟನೆ ನಡೆದಿಲ್ಲ. ಬೇಕಿದ್ದರೆ ರೆಸಾರ್ಟ್ ಸಿಸಿ ಕ್ಯಾಮರಾ ಪರಿಶೀಲಿಸಲಿ. ಸಿದ್ದು ಹಳ್ಳೇಗೌಡ, ನಾನು ಚೆನ್ನಾಗಿಯೇ ಇದ್ದೇವೆ, ಘಟನೆ ನಡೆದಿತ್ತು ಎಂದು ಹೇಳುವ ಹೊತ್ತಿನಲ್ಲಿ ನಾನು ನನ್ನ ಕುಟುಂಬದೊಂದಿಗೆ ಇದ್ದೆ, ಇದಕ್ಕಾಗಿ ನಾನು ಹೇಗೆ ಹಲ್ಲೆ ಮಾಡಲು ಸಾಧ್ಯ? ಅಲ್ಲಿ ನಮ್ಮ ಕೆಲವು ಸದಸ್ಯರ ನಡುವೆ ಕೆಲವು ತಪ್ಪು ತಿಳುವಳಿಕೆ ಇತ್ತು. ಅದಕ್ಕೆ ನಾನು ಜವಾಬ್ದಾರನಲ್ಲ. ಈ ಬಗ್ಗೆ ಸಿದ್ದು ಹಳೇ ಗೌಡ ಅದೇ ವಾಟ್ಸಾಪ್ ಗ್ರೂಪ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.ನಾನು ಕ್ಲಬ್ ನಲ್ಲಿ ಎಷ್ಟು ಹೊತ್ತು ಇದ್ದೆ, ಎಷ್ಟು ಹೊತ್ತಿಗೆ ಹೊರಬಂದೆ ಎಂದು ಬೇಕಿದ್ದರೆ ಪರಿಶೀಲನೆ ನಡೆಸಲಿ, ಏನೋ ಒಂದು ಗಲಾಟೆಯಾದಾಗ ನನ್ನ ಹೆಸರನ್ನು ಮಾಧ್ಯಮಗಳಲ್ಲಿ ಎಳೆದು ತರುವುದೇಕೆ, ಈ ರಾಜ್ಯದಲ್ಲಿ ಬೇಕಾದಷ್ಟು ವಿಷಯಗಳಿವೆ, ಸಮಸ್ಯೆಗಳಿಲ್ಲವೇ ಅದರ ಬಗ್ಗೆ ಮಾಧ್ಯಮಗಳಲ್ಲಿ ಏಕೆ ಬೆಳಕು ಚೆಲ್ಲುವುದಿಲ್ಲ, ಗೃಹ ಸಚಿವರು ಪ್ರತಿಕ್ರಿಯೆ ನೀಡುವಷ್ಟು ಗಂಭೀರ ವಿಷಯವೇ ಇದು ಎಂದು ಕೇಳಿದರು.
ಮುಖ್ಯಮಂತ್ರಿ ನಿವಾಸದಲ್ಲಿದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾಗದಲೇ ಮಾದಕ ದ್ರವ್ಯ ದಂಧೆಕೋರರ ಜತೆ ಡೀಲ್ ಕುದುರಿಸಲು ಯತ್ನಿಸಿದ್ದ ಇಬ್ಬರು ಪೊಲೀಸರನ್ನು ಆರ್‌ಟಿ ನಗರ ಪೊಲೀಸರು ಬಂಧನಕ್ಕೊಳಪಡಿಸಿರುವ ಪ್ರಕರಣದ ತನಿಖೆ ತೀವ್ರಗೊಳಿಸಲಿ ಎಂದು ಮೊಹಮ್ಮದ್ ನಲಪಾಡ್ ಒತ್ತಾಯಿಸಿದರು.
ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಕಾರಣಕ್ಕೆ ನನ್ನ ವರ್ಚಸ್ಸು ಹಾಳು ಮಾಡುವ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ: ನನಗೆ ಬಂದ ವರದಿ ಪ್ರಕಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಖಾಸಗಿ ಗೆಸ್ಟ್ ಹೌಸ್ ನಲ್ಲಿ ಸೇರಿದ್ದು ಯಾರೂ ಕೂಡ ಘಟನೆ ಬಗ್ಗೆ ದೂರು ನೀಡಿಲ್ಲ, ಆ ಬಗ್ಗೆ ಪೊಲೀಸರು ನಿರೀಕ್ಷಿಸುತ್ತಿದ್ದಾರೆ.ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದು, ತನಿಖೆ ಮಾಡುತ್ತಾರೆ ಎಂದರು.