
ರಸ್ತೆ ಅಪಘಾತದಲ್ಲಿ ಪತ್ರಕರ್ತ ಸಾವು
ಬೆಂಗಳೂರು: ನಗರದ ಟೌನ್ ಹಾಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿರಿಯ ಪತ್ರಕರ್ತರೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ.
ಬೆಂಗಳೂರಿನ ಟೌನ್ ಹಾಲ್ ಮುಂದೆ ಲಾರಿಯೊಂದು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪತ್ರಕರ್ತ ಗಂಗಾಧರ ಮೂರ್ತಿ ಮೃತಪಟ್ಟಿದ್ದಾರೆ. ಗಂಗಾಧರ ಮೂರ್ತಿ ಅವರು ವಿಜಯವಾಣಿ ಪತ್ರಿಕೆಯ ಪತ್ರಕರ್ತರಾಗಿದ್ದರು.
ಮೃತರು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬೈಕ್ ನಲ್ಲಿ ಚಾಮರಾಜಪೇಟೆಯಲ್ಲಿರುವ ತಮ್ಮ ಕಚೇರಿಗೆ ಬರುತ್ತಿದ್ದಾಗ, ಟೌನ್ ಹಾಲ್ ಬಳಿ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಗೆ ಢಿಕ್ಕಿ ಹೊಡೆದು ಬೈಕ್ ಮೇಲೆ ಬಿದ್ದಿದ್ದು, ಲಾರಿ ಅಡಿಯಲ್ಲಿ ಸಿಲುಕಿದ ಗಂಗಾಧರ ಮೂರ್ತಿ ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೆ ಕೊನೆಯುಸಿರೆಳೆದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.