ಕೋವಿಡ್ ನಿರ್ಬಂಧಗಳಿಗಿಂತ ಹೆಚ್ಚಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಿದೆ: ಎಫ್ ಕೆಸಿಸಿಐ ಅಧ್ಯಕ್ಷ

ಕೊರೋನಾ ಲಾಕ್ ಡೌನ್ ನಿರ್ಬಂಧ ತೆರವು ಮಾಡಲಾಗಿದೆ. ಆದರೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು, ಉದ್ಯಮಗಳು ಕಾರ್ಯನಿರ್ವಹಣೆಗೆ ಕಷ್ಟಪಡುತ್ತಿವೆ. ಇನ್ನು ಕೆಲವು ಮುಚ್ಚಿದ್ದರೆ ಮತ್ತೆ ಕೆಲವು ಮುಚ್ಚುವ ಹಂತಕ್ಕೆ ಬಂದಿವೆ. ಕೊರೋನಾ ಸಾಂಕ್ರಾಮಿಕದ ಜೊತೆಗೆ ಕೈಗಾರಿಕೆಗಳಿಗೆ ಪೂರೈಕೆಯಾಗುವ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಕೂಡ ಇದಕ್ಕೆ ಕಾರಣವಾಗಿದೆ. 

Published: 23rd January 2022 01:30 PM  |   Last Updated: 23rd January 2022 01:30 PM   |  A+A-


Federation of Karnataka Chambers of Commerce & Industry chief IS Prasad

ಎಫ್ ಕೆಸಿಸಿಐ ಅಧ್ಯಕ್ಷ ಐಎಸ್ ಪ್ರಸಾದ್

The New Indian Express

ಬೆಂಗಳೂರು: ಕೊರೋನಾ ಲಾಕ್ ಡೌನ್ ನಿರ್ಬಂಧ ತೆರವು ಮಾಡಲಾಗಿದೆ. ಆದರೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು, ಉದ್ಯಮಗಳು ಕಾರ್ಯನಿರ್ವಹಣೆಗೆ ಕಷ್ಟಪಡುತ್ತಿವೆ. ಇನ್ನು ಕೆಲವು ಮುಚ್ಚಿದ್ದರೆ ಮತ್ತೆ ಕೆಲವು ಮುಚ್ಚುವ ಹಂತಕ್ಕೆ ಬಂದಿವೆ. ಕೊರೋನಾ ಸಾಂಕ್ರಾಮಿಕದ ಜೊತೆಗೆ ಕೈಗಾರಿಕೆಗಳಿಗೆ ಪೂರೈಕೆಯಾಗುವ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಕೂಡ ಇದಕ್ಕೆ ಕಾರಣವಾಗಿದೆ. 

ಈ ಸಂದರ್ಭದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ(ಎಫ್ ಕೆಸಿಸಿಐ-FKCCI) ಫೆಡರೇಶನ್ ನ ಅಧ್ಯಕ್ಷ ಐಎಸ್ ಪ್ರಸಾದ್ ಅವರ ಜೊತೆ ನಡೆಸಲಾದ ವಿಶೇಷ ಸಂದರ್ಶನದಲ್ಲಿ ಕೈಗಾರಿಕೆಗಳು ಎದುರಿಸಿದ ಸಮಸ್ಯೆಗಳು, ಪರಿಹಾರಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಮುಂಬರುವ ಬಜೆಟ್ ನಲ್ಲಿ ನಿರೀಕ್ಷೆಗಳ ಬಗ್ಗೆ ಮಾತನಾಡಿದ್ದಾರೆ.

ಕೈಗಾರಿಕೆಗಳು ಮತ್ತೆ ಪುಟಿದೇಳಲು ಸಹಾಯ ಮಾಡಲು ಬಡ್ಡಿ ರಹಿತ ಸಾಲ ಮತ್ತು ಒಂದು ಬಾರಿ ತೆರಿಗೆ ಮನ್ನಾ ನೀಡುವಂತೆ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ, ಇದರಿಂದ ರಾಜ್ಯದ ಆರ್ಥಿಕತೆ ಕೂಡ ಸುಧಾರಿಸಲಿದೆ ಎನ್ನುತ್ತಾರೆ.

ರಾಜ್ಯದಲ್ಲಿ ಕೋವಿಡ್ ಉದ್ಯಮದ ಮೇಲೆ ಹೇಗೆ ಪರಿಣಾಮ ಬೀರಿದೆ?
ಬೆಂಗಳೂರಿನ ಹೆಚ್ಚಿನ ಕೈಗಾರಿಕೆಗಳು ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತವೆ. ಬೇರೆ ಜಿಲ್ಲೆಗಳು ಮತ್ತು ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರಿರುತ್ತಾರೆ. COVID-19 ಸಾಂಕ್ರಾಮಿಕದ ಮೊದಲ ಮತ್ತು ಎರಡನೆಯ ಅಲೆಗಳ ಸಮಯದಲ್ಲಿ, ಜೀವನ ನಡೆಸಲು ಸಾಧ್ಯವಾಗದೆ ಅನೇಕ ಕಾರ್ಮಿಕರು ಊರಿಗೆ ಮರಳಿದ್ದಾರೆ. ಕೋವಿಡ್ ಕಡಿಮೆಯಾದ ನಂತರ ಹೆಚ್ಚಿನ ಕಾರ್ಮಿಕರು ಮರಳಿದ್ದಾರೆ. ಸರ್ಕಾರವು ಎರಡನೇ ಮತ್ತು ಮೂರನೇ ಅಲೆಯ ಸಮಯದಲ್ಲಿ ಕೈಗಾರಿಕೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ, ಕಾರ್ಯನಿರ್ವಹಿಸುತ್ತಲೇ ಇವೆ.

ಹಾಗಾದರೆ ಉದ್ಯಮಕ್ಕೆ ಏನು ಹೊಡೆತ ಬಿತ್ತು?
ಸಾಂಕ್ರಾಮಿಕ ರೋಗಕ್ಕಿಂತ ಹೆಚ್ಚಾಗಿ ಅನೇಕ ಇತರ ಸಮಸ್ಯೆಗಳು, ಮುಖ್ಯವಾಗಿ ಕಚ್ಚಾ ವಸ್ತುಗಳ ಬೆಲೆಗಳ ಹೆಚ್ಚಳವು ಉದ್ಯಮದ ಮೇಲೆ ಪರಿಣಾಮ ಬೀರಿತು. ಸಾಂಕ್ರಾಮಿಕ ರೋಗವು ಉದ್ಯಮದ ಮೇಲೆ ಶೇಕಡಾ 15 ರಷ್ಟು ಪರಿಣಾಮ ಬೀರಿದರೆ, ಶೇಕಡಾ 85 ರಷ್ಟು ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮವಾಗಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಸ್‌ಎಂಇ) ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಎಸ್‌ಎಂಇ ವಲಯವು ದೇಶಾದ್ಯಂತ ಪ್ರತಿಭಟನೆಗಳನ್ನು ಸಹ ನಡೆಸಿತು.

ಯಾವ ವಲಯಗಳ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರಿದೆ?
ಕೋವಿಡ್ ಎರಡನೇ ಅಲೆ ತೆರವಿನ ನಂತರ ಕೈಗಾರಿಕೆಗಳಿಗೆ ಕೆಲಸ ಮಾಡಲು ಅವಕಾಶ ನೀಡಲಾಯಿತು. ಐಟಿ ಉದ್ಯಮವು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೆ ನಿರ್ಬಂಧಗಳನ್ನು ವಿಧಿಸಲಾಗಿರುವುದರಿಂದ ಹೋಟೆಲ್‌ಗಳು ಮತ್ತು ಆತಿಥ್ಯ ಉದ್ಯಮವು ಸಾಕಷ್ಟು ನಷ್ಟ ಅನುಭವಿಸಿವೆ. ಈಗಲೂ ಸಹ, ರಾತ್ರಿ ಕರ್ಫ್ಯೂ ಮುಂದುವರಿದಿದೆ, ಹೊಟೇಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಅವಧಿಪೂರ್ವ ಬಂದ್ ಮಾಡಬೇಕಾಗಿರುವುದರಿಂದ ವ್ಯಾಪಾರ-ವಹಿವಾಟು ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಮತ್ತು ಬೀರುತ್ತದೆ.

ನಾವು ಕೋವಿಡ್ ವೈರಸ್‌ನೊಂದಿಗೆ ಬದುಕಬೇಕು ಎಂದು ತಜ್ಞರು ಹೇಳುತ್ತಾರೆ. ನಾವು ವೈರಸ್‌ನೊಂದಿಗೆ ಜೀವಿಸುತ್ತಿರುವಾಗಲೂ ಕೈಗಾರಿಕೆಗಳು ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೇಗೆ ಉಳಿಸಿಕೊಳ್ಳಬಹುದು?
ರಾಜ್ಯದಲ್ಲಿ ಕೈಗಾರಿಕೆಗಳಲ್ಲಿ ಕೋವಿಡ್ ಕ್ಲಸ್ಟರ್‌ಗಳು ತೀರಾ ಕಡಿಮೆ. ಏಕೆಂದರೆ ಕೈಗಾರಿಕೆಗಳಿಗೆ ತಾವು ಹೇಗೆ ಬದುಕಬೇಕು ಎಂದು ತಿಳಿದಿದೆ. ತಮ್ಮ ಉದ್ಯೋಗಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಕೆಲಸ ಮಾಡುವಾಗ ಮಾಸ್ಕ್ ಧರಿಸುವುದು, ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಂತಾದ ಎಲ್ಲಾ COVID-ಸೂಕ್ತ ನಡವಳಿಕೆಯನ್ನು ಅನುಸರಿಸುತ್ತಾರೆ. ಎಲ್ಲಾ ಉದ್ಯೋಗಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಯನ್ನು ಪಡೆದಿದ್ದಾರೆ.

ಕೈಗಾರಿಕೆಗಳಿಗೆ ಸರ್ಕಾರ ಹೇಗೆ ಸಹಾಯ ಮಾಡುತ್ತದೆ? ಸರ್ಕಾರಕ್ಕೆ ಈ ಪರಿಸ್ಥಿತಿಯಲ್ಲಿ ನಿಮ್ಮ ಸಲಹೆಗಳೇನು?
ಸರ್ಕಾರವು ಸಬ್ಸಿಡಿಗಳು, ಬಡ್ಡಿರಹಿತ ಸಾಲಗಳನ್ನು ನೀಡಬೇಕು. ಸ್ವಲ್ಪ ಸಮಯದವರೆಗೆ ತೆರಿಗೆಗಳು ಮತ್ತು ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಬೇಕು, ಇದು ಕೈಗಾರಿಕೆಗಳಿಗೆ ಸ್ವಲ್ಪ ಮಟ್ಟಿಗೆ ನಷ್ಟವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮತ್ತೆ ಪುಟಿದೇಳಲು ಅನುವು ಮಾಡಿಕೊಡುತ್ತದೆ. ಇದು ಆರ್ಥಿಕತೆಯ ಮೇಲೂ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡನ್ನೂ ಬೆಂಬಲಿಸುವಂತೆ ಕೇಳಿಕೊಂಡಿದ್ದೇವೆ.

ನಿರ್ಬಂಧಗಳ ಫಲಿತಾಂಶವೆಂದರೆ ವೆಚ್ಚವನ್ನು ಕಡಿತಗೊಳಿಸಲು ನೌಕರರನ್ನು ಕೆಲಸದಿಂದ ತೆಗೆಯುವುದು. ಕೈಗಾರಿಕಾ ಉತ್ಪಾದಕತೆ ಮತ್ತು ಪ್ರಗತಿಗೆ ಬಹಳ ಮುಖ್ಯವಾದ ಮಾನವ ಸಂಪನ್ಮೂಲಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಹೇಗೆ?
ಕೈಗಾರಿಕೆಗಳು ಲಾಭವನ್ನು ಗಳಿಸದಿದ್ದಾಗ,ಸರಿಯಾದ ಉತ್ಪಾದನೆ ಇಲ್ಲದಿದ್ದರೆ ವೆಚ್ಚ ಕಡಿತ ಮತ್ತು ಉದ್ಯೋಗಿಗಳನ್ನು ತೆಗೆದುಹಾಕುವಂತಹ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತದೆ. ಶಾಲಾ-ಕಾಲೇಜಿಗೆ ಹೋಗದಿದ್ದರೂ ಜನರಿಗೆ ಕೆಲಸ ನೀಡುವ ಏಕೈಕ ಕ್ಷೇತ್ರ (ಕೈಗಾರಿಕಾ) ನಮ್ಮದು. ನಾವು ಕೆಲಸದ ಮೇಲೆ ತರಬೇತಿ ನೀಡುತ್ತೇವೆ.

ರಾಜ್ಯ ಸರ್ಕಾರಕ್ಕೂ ತೆರಿಗೆ ಕಟ್ಟುತ್ತೇವೆ. ಸರ್ಕಾರವು ನಮ್ಮನ್ನು ಬೆಂಬಲಿಸುವ ಮೂಲಕ ಸಹಾಯ ಮಾಡಬೇಕು, ಇದು ಅಂತಿಮವಾಗಿ ನಾವು ತೆಗೆದುಕೊಳ್ಳಬೇಕಾದ ಇಂತಹ ಅಹಿತಕರ ನಿರ್ಧಾರಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಸಾಂಕ್ರಾಮಿಕ ರೋಗವನ್ನು ಹೊರತುಪಡಿಸಿ ಬೇರೆ ಯಾವ ಅಂಶಗಳು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ?
ಉಕ್ಕು, ತಾಮ್ರ ಮತ್ತು ಇತರ ವಸ್ತುಗಳು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಬೆಳಗ್ಗೆ ಮತ್ತು ಸಂಜೆಯ ನಡುವೆ ಬದಲಾಗುತ್ತಲೇ ಇರುತ್ತದೆ. ಅದರ ಮೇಲೆ ಸ್ವಲ್ಪ ಮಿತಿ ಇರಬೇಕು. ರಾಜ್ಯ ಸರ್ಕಾರವು ಪೋರ್ಟಲ್ ಅನ್ನು ತೆರೆಯಬೇಕು. ಉತ್ಪಾದನಾ ವೆಚ್ಚವನ್ನು ಮಿತಿಯಲ್ಲಿ ಇರಿಸಲು ಸಹಾಯ ಮಾಡುವ ಉತ್ತಮ ಬೆಲೆಯಲ್ಲಿ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸಬೇಕು.

ಮುಂಬರುವ ಕೇಂದ್ರ ಹಾಗೂ ರಾಜ್ಯ ಬಜೆಟ್‌ನಲ್ಲಿ ನೀವು ಏನನ್ನು ನಿರೀಕ್ಷಿಸುತ್ತಿದ್ದೀರಿ?
ರಾಜ್ಯ ಸರಕಾರ ಕೈಗಾರಿಕೆಗಳ ಸಮೀಕ್ಷೆ ಮಾಡಬೇಕು. ಎಲ್ಲರಿಗೂ ಸರ್ಕಾರದ ಸಹಾಯ ಬೇಕಾಗಿಲ್ಲ. ಆದರೆ ಸರ್ಕಾರದ ಬೆಂಬಲ ಅಗತ್ಯವಿರುವ ಕೈಗಾರಿಕೆಗಳಿಗೆ ಬಡ್ಡಿರಹಿತ ಸಾಲ, ದುಡಿಯುವ ಬಂಡವಾಳ ಮತ್ತು ಇತರ ಸಬ್ಸಿಡಿಗಳನ್ನು ನೀಡಬೇಕು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಕುರಿತು ಮನವಿ ಮಾಡಿದ್ದೇವೆ. ಸರ್ಕಾರ ಸಕಾಲಿಕ ಬೆಂಬಲವನ್ನು ಈಗ ನೀಡಿದರೆ, ಇನ್ನೊಂದು ವರ್ಷದಲ್ಲಿ ಪುಟಿದೇಳಬಹುದು.


Stay up to date on all the latest ರಾಜ್ಯ news
Poll
Omicron-Covid-variant

ಭಾರತದಲ್ಲಿ ಕೋವಿಡ್‌ನಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ WHO ವರದಿ ಮತ್ತು ಅಂಕಿಅಂಶಗಳನ್ನು ನೀವು ಒಪ್ಪುತ್ತೀರಾ?


Result
ಹೌದು, ಒಪ್ಪಬಹುದು
ಇಲ್ಲ, ಒಪ್ಪಲಾಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp