ಲಸಿಕೆ ನೀಡಿಕೆಯಲ್ಲಿ ರಾಜ್ಯದ ಅಪೂರ್ವ ಸಾಧನೆ
ಕೊರೋನಾ ಲಸಿಕೆ ವಿಚಾರದಲ್ಲಿ ರಾಜ್ಯ ಅಪೂರ್ವ ಸಾಧನೆ ಮಾಡಿದ್ದು, 18 ವರ್ಷ ಮೀರಿದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
Published: 23rd January 2022 05:22 PM | Last Updated: 23rd January 2022 05:26 PM | A+A A-

ಕೋವಿಡ್-19 ಲಸಿಕೆ
ಬೆಂಗಳೂರು: ಕೊರೋನಾ ಲಸಿಕೆ ವಿಚಾರದಲ್ಲಿ ರಾಜ್ಯ ಅಪೂರ್ವ ಸಾಧನೆ ಮಾಡಿದ್ದು, 18 ವರ್ಷ ಮೀರಿದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು, ರಾಜ್ಯದಲ್ಲಿ 18 ವರ್ಷ ಮೀರಿದ ನಾಲ್ಕು ಕೋಟಿ 89 ಲಕ್ಷದ 16 ಸಾವಿರ ಮಂದಿಯನ್ನು ಲಸಿಕೆಗಾಗಿ ಗುರುತಿಸಲಾಗಿತ್ತು. ನಿನ್ನೆ ರಾತ್ರಿಯ ವೇಳೆಗೆ 4 ಕೋಟಿ 89 ಲಕ್ಷದ 29 ಸಾವಿರದ 819 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದು, ಗುರಿ ಮೀರಿ ಶೇಕಡ 100.1 ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಶೇಕಡ 85.3 ಮಂದಿ 2 ನೇ ಡೋಸ್ ಲಸಿಕೆ ಪಡೆದಿದ್ದಾರೆ. 15 ರಿಂದ 18 ವರ್ಷದ ಮಕ್ಕಳ ಲಸಿಕೀಕರಣದಲ್ಲಿ ಶೇಕಡ 68ರಷ್ಟು ಪ್ರಗತಿಯಾಗಿದೆ. 4 ಲಕ್ಷದ 80 ಸಾವಿರಕ್ಕಿಂತಲೂ ಹೆಚ್ಚು ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ ಎಂದರು.
ಈ ಮಧ್ಯೆ ಕೊರೋನಾ ಪರೀಕ್ಷೆಯಲ್ಲೂ ರಾಜ್ಯ ಉತ್ತಮ ಸಾಧನೆ ತೋರಿದ್ದು, 6 ಕೋಟಿಗೂ ಹೆಚ್ಚು ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಕಳೆದ ಡಿಸೆಂಬರ್ ನಿಂದ ಒಟ್ಟು ಪರೀಕ್ಷೆಗಳ ಪೈಕಿ ಶೇಕಡ 28ರಷ್ಟು ಮಕ್ಕಳಿದ್ದಾರೆ.
ರಾಜ್ಯಕ್ಕಿಂತ ದುಪ್ಪಟ್ಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಂತರ ಕರ್ನಾಟಕಕ್ಕೆ 3ನೇ ಸ್ಥಾನ ಲಭಿಸಿದೆ. ಈ ಸಾಧನೆಗೆ ಶ್ರಮಿಸಿದ ಆರೋಗ್ಯ ಕಾರ್ಯಕರ್ತರು, ಜಿಲ್ಲಾಡಳಿತಗಳು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.